ತಾಲ್ಲೂಕಿನ ಅತಿ ದೊಡ್ಡ ಕೆರೆಯೆಂದೇ ಖ್ಯಾತವಾದ ಅಮಾನಿ ಭದ್ರನ ಕೆರೆಯ ಒತ್ತುವರಿಯನ್ನು ಬುಧವಾರ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ತೆರವುಗೊಳಿಸಿದ್ದಾರೆ.
ಸುಮಾರು 840 ಎಕರೆ ವಿಸ್ತೀರ್ಣವಿರುವ ಈ ಬೃಹತ್ ಕೆರೆಯ ಅಚ್ಚುಕಟ್ಟಿನಲ್ಲಿ ಹದಿಮೂರು ಹಳ್ಳಿಗಳಿವೆ. ಸುಮಾರು 435 ಎಕರೆಯಷ್ಟು ಒತ್ತುವರಿಯಾಗಿದ್ದು, ರಾಗಿ, ಜೋಳ, ಹಿಪ್ಪುನೇರಳೆ, ಮೆಣಸಿನಕಾಯಿ, ದನಿಯಾ ಮುಂತಾದ ಬೆಳೆಗಳನ್ನಿಡಲಾಗಿದೆ. ಸುಮಾರು 18 ಖಾಸಗಿ ಕೊಳವೆ ಬಾವಿಗಳನ್ನು ಕೊರೆಸಿರುವುದಲ್ಲದೆ ಹನಿನೀರಾವರಿಯನ್ನೂ ಅಳವಡಿಸಲಾಗಿದೆ. ವಿಜಯಪುರ ಪುರಸಭೆಯ ವತಿಯಿಂದ 35 ಕೊಳವೆಬಾವಿಗಳು, ಹೊಸಪೇಟೆ ಪಂಚಾಯತಿಯಿಂದ 2 ಕೊಳವೆ ಬಾವಿಗಳನ್ನಿಲ್ಲಿ ಕೊರೆಸಲಾಗಿದೆ.
‘ಕೆರೆಗಳು ಸಾರ್ವಜನಿಕ ಆಸ್ತಿಗಳು. ದೇವಾಲಯಕ್ಕಿಂತ ಹೆಚ್ಚು ಮಹತ್ವವನ್ನು ನೀಡಿ ಅವನ್ನು ಉಳಿಸಿಕೊಳ್ಳಬೇಕು. ಹಿಂದೆ ನಮ್ಮನ್ನಾಳಿದ ಅರಸರು ಕೆರೆಗಳನ್ನು ಜನ, ಜಾನುವಾರುಗಳು, ಪ್ರಾಣಿ, ಪಕ್ಷಿಗಳು ಎಲ್ಲರ ಅನುಕೂಲಕ್ಕೆಂದು ಕಟ್ಟಿಸಿದ್ದಾರೆ. ಒತ್ತುವರಿ ಮಾಡುವವರಿಗೆ ತಿಳಿಹೇಳಿ. ಸರ್ಕಾರದಲ್ಲಿ ಕೆರೆ ಒತ್ತುವರಿ ಮಾಡಿರುವವರ ವಿರುದ್ಧ ಕಠಿಣ ಕಾನೂನುಗಳಿವೆ. ಆದರೂ ನಮ್ಮ ಕೆರೆ, ನಮ್ಮ ನೆಲ, ನಮ್ಮ ನೀರು, ನಮ್ಮ ನಾಡು ಎಂಬ ಭಾವನೆ ಎಲ್ಲರಲ್ಲೂ ಮೂಡಿದಾಗ ಯಾರೂ ಒತ್ತುವರಿ ಮಾಡುವುದಿಲ್ಲ. ಗ್ರಾಮ ಪಂಚಾಯತಿಯಲ್ಲಿ ಕೆರೆಗಳ ಬಗ್ಗೆ ಮಾಹಿತಿ ಹೊಂದಿರಬೇಕು. ಕೆರೆಯ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಬೇಕು’ ಎಂದು ಅವರು ಹೇಳಿದರು.
ಡಿ.ಡಿ.ಎಲ್.ಆರ್. ಅಧಿಕಾರಿ ಅಜ್ಜಪ್ಪ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ನಾಗರಾಜ್, ನವಾಬ್ ಪಾಷ, ಡಿ.ವೈ.ಎಸ್.ಪಿ ಸಣ್ಣತಿಮ್ಮಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -