25.1 C
Sidlaghatta
Sunday, August 14, 2022

ತಾಲ್ಲೂಕು ಮಟ್ಟದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ

- Advertisement -
- Advertisement -

ವರ್ಷಗಳು ಕಳೆದರೂ ಕಾಮಗಾರಿ ಪ್ರಾರಂಭಿಸದ ಹಾಗೂ ಶೇ. ೧೦–-೨೦ ರಷ್ಟು ಕಡಿಮೆ ಮೊತ್ತಕ್ಕೆ ಟೆಂಡರ್ ಕರೆಯುವ ಗುತ್ತಿಗೆದಾರರಿಗೆ ಯಾವುದೇ ಕಾಮಗಾರಿ ನೀಡಬಾರದು ಮತ್ತು ಅಂತಹವರನ್ನು ಕೂಡಲೇ ಕಪ್ಪುಪಟ್ಟಿಗೆ ಸೇರಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಸೂಚಿಸಿದರು.
ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನಾಧ್ಯಂತ ಸುಮಾರು ನಾಲ್ಕು ಕಾಮಗಾರಿಗಳಿಗೆ ಟೆಂಡರ್ ಕಾರ್ಯ ಮುಗಿದಿದ್ದು ಈವರೆಗೂ ಗುತ್ತಿಗೆದಾರ ಕೆಲಸ ಶುರುಮಾಡಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಜಮೀರ್ ಮಾಹಿತಿ ನೀಡಿದಾಗ ಇಂತಹವರಿಗೆಲ್ಲಾ ಕಾಮಗಾರಿಗಳನ್ನು ಯಾಕೆ ನೀಡುತ್ತೀರಿ. ಕೂಡಲೇ ಕಾಮಗಾರಿಯ ಟೆಂಡರ್ನ್ನು ರದ್ದುಗೊಳಿಸಿ ಮರುಟೆಂಡರ್ ಮಾಡುವ ಮೂಲಕ ಕಾಮಗಾರಿ ಪ್ರಾರಂಭ ಮಾಡಿ ಮತ್ತು ಗುತ್ತಿಗೆದಾರನನ್ನು ಕೂಡಲೇ ಕಪ್ಪುಪಟ್ಟಿಗೆ ಸೇರಿಸಿ ಎಂದರು.
ತಾಲ್ಲೂಕಿನಾಧ್ಯಂತ ಇರುವ ೩೩೯ ಅಂಗನವಾಡಿ ಕೇಂದ್ರಗಳ ಪೈಕಿ ಸುಮಾರು ೨೦೦ ಕ್ಕೂ ಹೆಚ್ಚು ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಅವರು ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಅನುದಾನಗಳಿಗಾಗಿಯೇ ಕಾದು ಕುಳಿತರೆ ಅಂಗನವಾಡಿ ಕೇಂದ್ರಗಳ ನಿರ್ಮಾಣ ಕಷ್ಟವಾಗುತ್ತದೆ. ಹಾಗಾಗಿ ತಾಲ್ಲೂಕು ಪಂಚಾಯತಿಯ ನರೇಗಾ ಯೋಜನೆಯಡಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲೂ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಿಕೊಳ್ಳುವಂತೆ ಸೂಚಿಸಿದರು.
ಅಂಗನವಾಡಿ ಮಕ್ಕಳಿಗೆ ಉತ್ತಮ ಆಹಾರ, ಮಲಗಲು ಜಮಖಾನಾ ಅಥವ ಕಂಬಳಿ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಸದಸ್ಯರ ಅನುದಾನಗಳಲ್ಲಿ ಕಾಮಗಾರಿ ಮಾಡಿ ಕಾಮಗಾರಿ ಪೂರ್ಣಗೊಂಡ ಮೇಲೆ ಅಲ್ಲೊಂದು ನಾಮಫಲಕ ಅಳಿವಡಿಸದೇ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತ ಪಡಿಸಿದರು. ಲಕ್ಷಾಂತರ ರೂ ವೆಚ್ಚದಲ್ಲಿ ಕಾಮಗಾರಿ ಮಾಡಿ ಒಂದೆರಡು ಸಾವಿರ ಖರ್ಚು ಮಾಡಿ ಬೋರ್ಡ್ ಅಳವಡಿಸಲಾಗುವುದಿಲ್ಲ. ಹಾಗಾದರೇ ನೀವು ಅಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೀರಾ ಎಂದರು.
ಗುತ್ತಿಗೆದಾರರು ಕಡಿಮೆಗೆ ಟೆಂಡರ್ ಹಾಕುವುದರಿಂದ ಕಾಮಗಾರಿಗಳ ಗುಣಮಟ್ಟ ಯಾವ ಮಾತ್ರ ಇರುತ್ತದೆ. ಕಾಮಗಾರಿ ನಡೆಯುವ ವೇಳೆ ಆ ಭಾಗದ ತಾಲ್ಲೂಕು ಪಂಚಾಯತಿ ಸದಸ್ಯರು ಹಾಗೂ ಜಿಲ್ಲಾ ಪಂಚಾಯತಿ ಸದಸ್ಯರ ಗಮನಕ್ಕೆ ತರಬೇಕು ಮತ್ತು ಕಾಮಗಾರಿ ವೀಕ್ಷಣೆಗೆ ಕರೆದುಕೊಂಡು ಹೋಗಬೇಕು ಎಂದರು.
ತಾಲ್ಲೂಕಿನಾದ್ಯಂತ ಇರುವ ಆರೋಗ್ಯ ಕೇಂದ್ರಗಳಲ್ಲಿ ಮಹಿಳಾ ವೈದ್ಯರ ಕೊರತೆಯಿದ್ದು, ಇರುವ ವೈದ್ಯರನ್ನೇ ವಾರಕ್ಕೊಮ್ಮೆ ತಾಲ್ಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವಂತೆ ತಾಲ್ಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಗೆ ಕೂಡಲೇ ಕೊಳವೆಬಾವಿಯೊಂದನ್ನು ಕೊರೆಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗೆ ಸೂಚಿಸಿದ ಅವರು ಈ ಬಗ್ಗೆ ಶಾಸಕರೊಂದಿಗೆ ನಾನು ಮಾತನಾಡುತ್ತೇನೆ. ಆಸ್ಪತ್ರೆ ಆವರಣದಲ್ಲೊಂದು ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿಕೊಡಿ ಎಂದರು.
ತಾಲ್ಲೂಕಿನಾದ್ಯಂತ ಇರುವ ನೀಲಗಿರಿ ಮರಗಳು ಹಾಗೂ ಕೆರೆಗಳಲ್ಲಿರುವ ಜಾಲಿ ಮರಗಳು ಕೂಡಲೇ ತೆರವುಗೊಳಿಸಿ ಅರಣ್ಯ ಇಲಾಖೆಯಿಂದ ಬೇರೆ ಬೇರೆ ಸಸಿಗಳನ್ನು ನೆಡುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಪಿ.ನಿರ್ಮಲಾಮುನಿರಾಜು, ಸದಸ್ಯರಾದ ಸತೀಶ್, ತನುಜಾರಘು, ಎ.ಎಂ.ಜಯರಾಮರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ನರಸಿಂಹಯ್ಯ, ಇಓ ವೆಂಕಟೇಶ್, ತಹಸೀಲ್ದಾರ್ ಕೆ.ಎಂ.ಮನೋರಮಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here