29.2 C
Sidlaghatta
Friday, February 20, 2026

ತಾಲ್ಲೂಕು ಮಟ್ಟದ ಕಲಿಕೋತ್ಸವ

- Advertisement -
- Advertisement -

‘ಮಣ್ಣಲ್ಲಿ ದುಡಿಯುತ, ಬಿಸಿಲಲ್ಲಿ ಬೇಯುತ, ಮಳೆಯಲ್ಲಿ ನಡುಗುತ, ದುಡಿಯುವವ. ಅವ ಮಾನವನಲ್ಲ. ನಮ್ಮನ್ನು ಕಾಯಲು ಬಂದ ದೇವದೂತ’ ಎಂದು ಮಾತನಾಡಿದ್ದು ಭಾಷಣಕಾರರಲ್ಲ. ಐದನೇ ತರಗತಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಯ ಭಾಷಣದ ಸಾಲುಗಳಿವು.
‘ರೈತ ನಮ್ಮ ದೇಶದ ಬೆನ್ನೆಲುಬು’ ಎಂಬ ವಿಷಯದ ಬಗ್ಗೆ ಮಾತನಾಡಿದ ಚರಣ್, ಬಶೆಟ್ಟಹಳ್ಳಿ ಹೋಬಳಿಯ ಪೆಂಡ್ಲಿವಾರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿ. ರೈತನ ಬದುಕು, ದೇಶದ ಸ್ಥಿತಿ, ರೈತನ ಕಷ್ಟ, ಆತ್ಮಹತ್ಯೆ ಮತ್ತು ಪರಿಹಾರದ ಬಗ್ಗೆ ಪುಟ್ಟ ಬಾಲಕ ನಿರರ್ಗಳವಾಗಿ ಮಾತನಾಡುತ್ತಿದ್ದರೆ, ಹಿರಿಯರೂ ಕೂಡ ತಲೆದೂಗುವಂತಿತ್ತು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಓದು, ಬರಹ ಮತ್ತು ಅಭಿವ್ಯಕ್ತಿ ಸಾಮರ್ಥ್ಯಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ವಿಧ ವಿಧವಾದ ಸ್ಪರ್ಧೆಗಳ ಮೂಲಕ ಪ್ರದರ್ಶಿಸಿದರು.
ತಾಲ್ಲೂಕಿನಾದ್ಯಂತ ಕ್ಲಸ್ಟರ್ ಮಟ್ಟದಲ್ಲಿ ಸ್ಪರ್ಧೆಗಳನ್ನು ನಡೆಸಿ ಆಯ್ಕೆಯಾದವರಿಗೆ ತಾಲ್ಲೂಕು ಮಟ್ಟದಲ್ಲಿ ಸ್ಪರ್ಧೆ ನಡೆಸಲಾಗುತ್ತಿದೆ. ತಾಲ್ಲೂಕು ಮಟ್ಟದಲ್ಲಿ ವಿಜೇತರು ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಲಿದ್ದಾರೆ. ಒಂದರಿಂದ ಎಂಟನೆ ತರಗತಿಯ 750 ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಓದು, ಬರಹ ಮತ್ತು ಅಭಿವ್ಯಕ್ತಿ ಸಾಮರ್ಥ್ಯಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತಾಲ್ಲೂಕಿನಾದ್ಯಂತ ಸರ್ಕಾರಿ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳನ್ನು ಆಯಾ ಶಾಲೆಯ ಶಿಕ್ಷಕರು ಕರೆತಂದಿದ್ದರು.
ತಾಲ್ಲೂಕು ಮಟ್ಟದ ಕಲಿಕೋತ್ಸವಕ್ಕೆ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮಾತನಾಡಿ, ‘ಶಾಲೆಯಲ್ಲಿ ಮಕ್ಕಳು ಕಲಿಯುತ್ತಿರುವ ವಿಷಯಗಳನ್ನು ಅಭಿವ್ಯಕ್ತಿಸಲು, ಗುಣಾತ್ಮಕವಾದ ಕಲಿಕೆಗೆ ಪ್ರೇರೇಪಿಸಲು ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ನೀಡಲಾಗುತ್ತಿದೆ. ಪರೋಕ್ಷವಾಗಿ ಮಕ್ಕಳನ್ನು ಕಲಿಯಲು ಪ್ರೋತ್ಸಾಹಿಸುವುದು, ಸ್ಪರ್ಧಾ ಮನೋಭಾವ ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಮಕ್ಕಳಿಗೆ ಕಲಿಕೆಯು ಹೊರೆಯಾಗಬಾರದು. ಶಿಕ್ಷಣ ಒತ್ತಾಯವಾಗಿರದೆ ಉತ್ಸಾಹ ತುಂಬಬೇಕೆಂಬುದು ಆಶಯವಾಗಿದೆ’ ಎಂದು ಹೇಳಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುಮಾ, ಕ್ಷೇತ್ರ ಸಹಾಯಕ ನಿರ್ದೇಶಕ ರಂಗಪ್ಪ, ನಾರಾಯಣಸ್ವಾಮಿ, ಶ್ರೀರಾಮಯ್ಯ, ಸುಂದರಾಚಾರಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!