ನಗರದ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಐನಾ ಟ್ರಸ್ಟ್, ಸೌಂದರ್ಯ ಗ್ರಾಮೀಣ ಮತ್ತು ಪಟ್ಟಣ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ, ಸ್ತ್ರೀ ಶಕ್ತಿ ಮಹಿಳೆಯರಿಗೆ, ಚುನಾಯಿತ ಮಹಿಳಾ ಜನಪ್ರತಿನಿಧಿಗಳಿಗೆ ಹಾಗೂ ಮಹಿಳಾ ಸರ್ಕಾರಿ ನೌಕರರಿಗೆ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಮಹಿಳಾ ಕ್ರೀಡಾಕೂಟವನ್ನು ಉದ್ಘಾಟಿಸಿ,ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಅವರ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿ ಸಾಧಿಸಿ ತೋರಿಸಿದ್ದಾರೆ. ಕುಟುಂಬದ ಬೆನ್ನೆಲುಬಾಗಿದ್ದ ಮಹಿಳೆಯು ಇಂದು ಸಮಾಜದ ಬೆನ್ನೆಲುಬಿನಂತಾಗಿರುವುದು ಹರ್ಷದ ಸಂಗತಿ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಮಹಿಳೆ ಸಾಮಾಜಿಕ, ಶೈಕ್ಷಣಿಕವಾಗಿ ಜಾಗೃತರಾಗಿದ್ದರೆ ಸುಭದ್ರ ಸಮಾಜ ನಿರ್ಮಿಸಬಹುದು. ಎಲ್ಲಾ ಪೋಷಕರು ಮೊದಲು ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಫಲಿತಾಂ ಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸುತ್ತಿದ್ದಾರೆ. ಮಹಿಳೆ ಯರು ಯಾರಿಗೂ ಕಡಿಮೆಯಿಲ್ಲ ಎನ್ನು ವುದು ಇದರಿಂದ ಸಾಬೀತಾಗುತ್ತಿದೆ. ಮದರ್ ಥೆರೆಸಾ ಸೇರಿದಂತೆ ಅನೇಕ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವುದನ್ನು ನಾವುಗಳು ಸ್ಮರಿಸಿಕೊಳ್ಳಬಹುದು ಎಂದು ಹೇಳಿದರು.
ಸಿಡಿಪಿಒ ಅಧಿಕಾರಿ ಲಕ್ಷ್ಮೀದೇವಮ್ಮ ಮಾತನಾಡಿ, ಮಹಿಳೆಯರಿಗೆ ನಡೆಸುವ ಕ್ರೀಡಾಕೂಟಕ್ಕೆ ಸರ್ಕಾರ ಕೇವಲ ಐದು ಸಾವಿರ ರೂ ಅನುದಾನ ನೀಡುತ್ತಿದೆ. ಅದು ಏನೇನೂ ಸಾಲದು. ಕ್ರೀಡಾಕೂಟಕ್ಕೆ ಆಗಮಿಸುವ ಮಹಿಳೆಯರಿಗೆ ನೀರು, ತಿಂಡಿ, ಬಹುಮಾನಗಳಿಗೆ ಇನ್ನಷ್ಟು ಅನುದಾನ ಬೇಕಿದೆ. ಈದಿನ ನಾವು ಮೂರು ವಯಸ್ಕ ಹಂತಗಳಲ್ಲಿ ಕ್ರೀಡೆಗಳನ್ನು ನಡೆಸುತ್ತಿದ್ದೇವೆ. ಓಟ, ಮ್ಯೂಸಿಕಲ್ ಚೇರ್, ಶಾಟ್ ಪುಟ್, ಲೆಮನ್ ಅಂಡ್ ಸ್ಪೂನ್ ಆಡಿಸುತ್ತಿದ್ದೇವೆ. ಭಾಗವಹಿಸುವ ಎಲ್ಲರಿಗೂ ಸಮಾಧಾನಕರ ಬಹುಮಾನವಾಗಿ ಸ್ಟೀಲ್ ಡಬ್ಬಿ, ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡುತ್ತಿರುವುದಾಗಿ ಹೇಳಿದರು.
ನಗರಸಭೆ ಪ್ರಭಾರಿ ಅಧ್ಯಕ್ಷೆ ಪ್ರಭಾವತಿ ಸುರೇಶ್, ಭಾರತಿ ಆಂಜನೇಯರೆಡ್ಡಿ, ರಂಗನಾಥ, ಡಾ.ವಿಜಯ್, ಡಾ.ಮಹೇಶ್, ಡಾ.ವಿಜಯ, ಚಂದ್ರಕಲಾ, ಅಗಜಾನನಮೂರ್ತಿ ಹಾಜರಿದ್ದರು.
- Advertisement -
- Advertisement -
- Advertisement -