ದಾಸರು ಯಾವುದೇ ಜಾತಿ, ಕುಲ, ಮತ, ಪಂಥಗಳಿಗೆ ಸೇರಿದವರಲ್ಲ. ಅದನ್ನು ಮೀರಿ ಭಗವಂತನಿಗೆ ಶರಣಾಗತಿಯಾದವರು. ದಾಸರು ಹುಟ್ಟು ಸಾವುಗಳನ್ನು ಗೆದ್ದಿರುವವರು. ಈ ವಾಗ್ಗೇಯಕಾರರ ಆರಾಧನೆಯನ್ನು ವ್ರತದಂತೆ, ಪರಂಪರೆಯಂತೆ, ಪೂಜೆಯಂತೆ ತಾಲ್ಲೂಕಿನಲ್ಲಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಮಾರುತಿ ಸಂಗೀತ ಅಕಾಡೆಮಿಯ ಮಂಜುಳಾ ಜಗದೀಶ್ ತಿಳಿಸಿದರು.
ನಗರದ ಕಾಳಿಕಾಂಭ ಕಮಠೇಶ್ವರಸ್ವಾಮಿ ದೇವಾಲಯದ ಸಮುದಾಯ ಭವನದಲ್ಲಿ ಭಾನುವಾರ ಮಾರುತಿ ಸಂಗೀತ ಅಕಾಡೆಮಿ ವತಿಯಿಂದ ಪುರಂದರದಾಸರು, ಸದ್ಗುರು ತ್ಯಾಗರಾಜಸ್ವಾಮಿ, ಕನಕದಾಸರು, ಯೋಗಿ ನಾರೇಯಣ ಯತೀಂದ್ರರು ಹಾಗೂ ವಾಗ್ಗೇಯಕಾರರ ಆರಾಧನಾ ಮಹೋತ್ಸವದಲ್ಲಿ ಅವರು ಮಾತನಾಡಿದರು.
ದಾಸ ಸಾಹಿತ್ಯ ಎಂಬುದು ಎಂದಿಗೂ ಆರದ ನಂದಾದೀಪವಿದ್ದಂತೆ. ಸಂಗೀತ ಬೆರೆತಾಗ ಅದು ಇನ್ನಷ್ಟು ಪ್ರಜ್ವಲವಾಗಿ ಬೆಳಗುತ್ತದೆ. ಸ್ಥಳೀಯ ಕಲಾವಿದರಲ್ಲದೆ, ವಿವಿದಡೆಗಳಿಂದ ಆಹ್ವಾನಿತ ಕಲಾವಿದರ ಕಾರ್ಯಕ್ರಮವಿರುತ್ತದೆ. ಎಳೆಯರಿಗೆ ಇದು ಕಲಿಕೆಯಾದರೆ, ಕಲಾಭಿಮಾನಿಗಳಿಗೆ ರಸದೌತಣ ಎಂದು ವಿವರಿಸಿದರು.
ವಿದ್ವಾನ್ ಜಗದೀಶ್ ಕುಮಾರ್ ಮಾತನಾಡಿ, ಪುರಾತನ ಕಾಲದಿಂದಲೂ ನಮ್ಮ ಸಮಾಜದಲ್ಲಿ ಸಂಗೀತಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿದ್ದಾರೆ. ಯುವ ಪೀಳಿಗೆಗೆ ಸಂಗೀತವನ್ನು ಕಲಿಸುತ್ತಾ ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಮಾರುತಿ ಸಂಗೀತ ಅಕಾಡೆಮಿಯು ಶ್ರಮಿಸುತ್ತಿದ್ದು, ಈ ಕಾರ್ಯಕ್ರಮದ ಮೂಲಕ ಮಕ್ಕಳ ಪ್ರತಿಭೆಯನ್ನು ಪರಿಚಯಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಚಿಕ್ಕಮಕ್ಕಳು ಮತ್ತು ಹಿರಿಯರು ತ್ಯಾಗರಾಜರ ಮತ್ತು ಯೋಗಿನಾರಾಯಣ ಯತೀಂದ್ರರ ಕೀರ್ತನೆಗಳನ್ನು ಹಾಡುತ್ತಾರೆ. ವಿವಿಧ ಸಂಗೀತ ವಿಧುಶಿಗಳ ಕಲಾ ಪ್ರದರ್ಶನವೂ ಇರುತ್ತದೆ ಎಂದು ಹೇಳಿದರು.
ನಾದಸ್ವರ ವಿದ್ವಾನ್ ಮುನಿನಾರಾಯಣಪ್ಪ ಸಂಗಡಿಗರಿಂದ ನಾದಸ್ವರ ಕಚೇರಿ, ಮಾರುತಿ ಸಂಗೀತ ಅಕಾಡೆಮಿಯ ವಿದ್ಯಾರ್ಥಿಗಳಿಂದ ಗಾಯನ, ಮಂಜುಳಾ ಜಗದೀಶ್ ನೇತೃತ್ವದಲ್ಲಿ ಆಹ್ವಾನಿತ ಕಲಾವಿದರಿಂದ ಪಂಚರತ್ನ ಕೀರ್ತನೆಗಳ ಗೋಷ್ಠಿ ಗಾಯನ, ಬೆಂಗಳೂರು ನಳಿನಾಕ್ಷಿ ಅವರ ವೀಣಾ ವಾದನ, ಸಂಗೀತ ವಿದುಶಿ ಡಿ.ಶಶಿಕಲಾ ಅವರ ಸಂಗೀತ ಕಚೇರಿ, ಚಿಂತಾಮಣಿ ಎ.ವಿ.ವಿಶ್ವನಾಥ್ ಅವರ ಹಾರ್ಮೋನಿಯಂ ಸೋಲೋವಾದನ ಮುಂತಾದ ಕಾರ್ಯಕ್ರಮಗಳು ದಿನಪೂರ್ತಿ ನಡೆದವು.
ಜನಾರ್ಧನಮೂರ್ತಿ, ಬಿ.ಕೆ.ಮುನಿರತ್ನಮಾಚಾರ್, ಸೋಮಶೇಖರ್ ಹಾಜರಿದ್ದರು.
- Advertisement -
- Advertisement -
- Advertisement -