ದೇಶರಕ್ಷಣೆ ನಮ್ಮೆಲ್ಲರ ಹೊಣೆ. ದಿ ಇಂಡಿಯನ್ ನ್ಯಾಷನಲ್ ಆರ್ಮಿ ಅಥವಾ ಆಝಾದ್ ಹಿಂದ್ ಫೌಜ್ ಎರಡನೆಯ ಮಹಾಯುದ್ಧದಲ್ಲಿ ಇಂಪೀರಿಯಲ್ ಜಪಾನ್ ಆರ್ಮಿಯೊಂದಿಗೆ ಸೇರಿ ಭಾರತವನ್ನು ಆಳುತ್ತಿದ್ದ ಬ್ರಿಟಿಷರ ವಿರುದ್ಧ ಹೋರಾಡಿದ ಭಾರತೀಯ ಸಂಸ್ಥೆ. ದೇಶದ ಸ್ವಾತಂತ್ರ್ಯಕ್ಕಾಗಿ ಸ್ಥಾಪನೆಯಾದ ಸೇನೆಯಿದು ಎಂದು ಯಣ್ಣಂಗೂರಿನ ಯೋಧ ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆ ಹಾಗೂ ಶಾಲೆಯ ವತಿಯಿಂದ ನಡೆಸಿದ ಆಝಾದ್ ಹಿಂದ್ ಫೌಜ್ ಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎರಡನೆಯ ಮಹಾಯುದ್ಧದ ಸಮಯದಲ್ಲಿ ಜಪಾನಿಯರಿಂದ ಯುದ್ಧ ಕೈದಿಗಳಾದ ಬ್ರಿಟಿಷ್ ಸೈನ್ಯದ ಭಾರತೀಯರನ್ನು ಸಂಘಟಿಸಿ ಈ ಸೈನ್ಯವನ್ನು ರಚಿಸಲಾಯಿತು. ಈ ಸೈನ್ಯವನ್ನು ಸಂಘಟಿಸುವದರಲ್ಲಿ ರಾಸಬಿಹಾರಿ ಘೋಷ್ ತುಂಬಾ ಶ್ರಮಪಟ್ಟವರು. ಸುಭಾಷಚಂದ್ರ ಬೋಸ್ ಈ ಸೈನ್ಯದ ಮುಖಂಡತ್ವ ವಹಿಸಿಕೊಂಡರು. ಕ್ಯಾಪ್ಟನ್ ಶಹಾನವಾಜ್, ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ಇವರು ಈ ಸೈನ್ಯದ ಪ್ರಮುಖರು. ಕರ್ನಾಟಕದವರೇ ಆದ ಐ.ಎನ್.ಎ. ರಾಮರಾವ್ ಈ ಸೈನ್ಯದಲ್ಲಿದ್ದರು.
ಯುದ್ಧಸಮಯದಲ್ಲಿ ಬರ್ಮಾ ದೇಶದಲ್ಲಿ ಮುನ್ನುಗ್ಗಿ, ಭಾರತದ ಗಡಿಯ ಹತ್ತಿರಕ್ಕೆ ಈ ಸೈನ್ಯ ತಲುಪಿತ್ತು. ಆದರೆ ಜಪಾನ್ ಮೇಲೆ ಅಣುಬಾಂಬ್ ದಾಳಿಯಿಂದಾಗಿ, ಜಪಾನ್ ಮಿತ್ರಸೈನ್ಯಕ್ಕೆ ಶರಣಾಗುವದರೊಂದಿಗೆ ಆಝಾದ್ ಹಿಂದ್ ಸೈನ್ಯಕ್ಕೆ ಹಿನ್ನಡೆಯಾಯಿತು. ಸುಭಾಷಚಂದ್ರ ಬೋಸ್ ಅವರ ವಿವಾದಾತ್ಮಕ ವಿಮಾನ ದುರಂತದೊಂದಿಗೆ ಈ ಸೈನ್ಯದ ಹೋರಾಟ ಸಂಪೂರ್ಣವಾಗಿ ಮುಕ್ತಾಯವಾಯಿತು ಎಂದು ವಿವರಿಸಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಭಾರತದ ಜನರ ಮನಸ್ಸಿನಲ್ಲಿ ಭಾರತ ರಾಷ್ಟ್ರೀಯ ಸೈನ್ಯ ಶಾಶ್ವತ ಸ್ಥಾನವನ್ನು ಪಡೆದಿದೆ. ಭಾರತದ ಸ್ವಾತಂತ್ರ್ಯ ಸಾಧನೆಗೆ ಭಾರತ ರಾಷ್ಟ್ರೀಯ ಸೇನೆಯ ಕೊಡುಗೆ ಗಮನಾರ್ಹವಾದದ್ದು ಎಂದು ಹೇಳಿದರು.
ಶಾಲೆಯ ಆವರಣದಲ್ಲಿ ಯಣ್ಣಂಗೂರಿನ ಯೋಧ ರವಿಕುಮಾರ್ ಅವರಿಂದ ಹಲಸು ಮತ್ತು ನೇರಳೆ ಗಿಡವನ್ನು ನೆಡಿಸಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ , ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಎಸ್ಡಿಎಂಸಿ ಸದಸ್ಯರಾದ ಮಂಜುನಾಥ್, ಹನುಮಂತರೆಡ್ಡಿ, ರಾಮಚಂದ್ರ, ಮುಖ್ಯಶಿಕ್ಷಕಿ ವೆಂಕಟರತ್ನಮ್ಮ, ಶಿಕ್ಷಕ ಚಾಂದ್ಪಾಷ, ಗ್ರಾಮಸ್ಥರಾದ ನಡಿಪಿನಾಯಕನಹಳ್ಳಿ ರವಿ, ಆನಂದ್, ಅಶ್ವತ್ಥನಾರಾಯಣ್, ಎ.ಜಿ.ನರಸಿಂಹಮೂರ್ತಿ, ಮುನಿಯಪ್ಪ, ವೆಂಕಟಮ್ಮ, ನರಸಿಂಹಮೂರ್ತಿ, ರವಿಪ್ರಕಾಶ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -