ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಶಾಶ್ವತ ನೀರಾವರಿ ಹೋರಾಟ ಸಮಿತಿ ಮತ್ತು ಯುವಶಕ್ತಿ ಸಂಯುಕ್ತಾಶ್ರಯದಲ್ಲಿ ಬಯಲು ಸೀಮೆಗೆ ಸಮಗ್ರ ಶಾಶ್ವತ ನೀರಾವರಿ ಒತ್ತಾಯಿಸಿ ಗುರುವಾರ ಬೃಹತ್ ಪ್ರತಿಭಟನಾ ಟ್ರ್ಯಾಕ್ಟರ್ ರ್ಯಾಲಿಯೊಂದಿಗೆ ವಿಧಾನಸೌಧ ಮುತ್ತಿಗೆ ಹಾಕಲು ನಗರದಿಂದ ಹೊರಟ ಟ್ರ್ಯಾಕ್ಟರ್ಗಳಿಗೆ ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ ಚಾಲನೆ ನೀಡಿದರು.
ನಗರ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಹೊರಟ ಪ್ರತಿಭಟನಾಕಾರರ ಟ್ರ್ಯಾಕ್ಟರ್ಗಳು ಹಂಡಿಗನಾಳದ ಬಳಿಯಲ್ಲಿ ಸೇರಿ ಹೊರಟವು. ಇತ್ತ ದಿಬ್ಬೂರಹಳ್ಳಿ ಕಡೆಯಿಂದ, ಜಂಗಮಕೋಟೆ, ಚೀಮಂಗಲ ಮೇಲೂರು, ಮಳ್ಳೂರು, ಅಪ್ಪೇಗೌಡನಹಳ್ಳಿ, ಚೌಡಸಂದ್ರ ಮುಂತಾದೆಡೆಯಿಂದಲೂ ಟ್ರ್ಯಾಕ್ಟರ್ ಹೊರಟವು.
ಖಾಲಿ ಬಿಂದಿಗೆಗಳನ್ನು ಕಟ್ಟಿಕೊಂಡು, ಬಿಸಿಲಿಗೆ ನೆರಳಾಗಿ ಸೊಪ್ಪು, ಬಟ್ಟೆಯನ್ನು ಕಟ್ಟಿಕೊಂಡು ಬೆಂಗಳೂರಿನ ಕಡೆಗೆ ಪ್ರತಿಭಟನಾಕಾರರು ಪ್ರಯಾಣ ಬೆಳೆಸಿದರು.
‘ನೀರಿಗಾಗಿ ಶಾಶ್ವತ ಯೋಜನೆಯನ್ನು ರೂಪಿಸದ ಜನಪ್ರತಿನಿಧಿಗಳಿಗೆ ವಿಧಾನಸೌಧ ಮುತ್ತಿಗೆ ಹಾಕುವ ಮೂಲಕ ನಮ್ಮ ಕಷ್ಟವನ್ನು ತಿಳಿಸಲಿದ್ದೇವೆ. ಶ್ರಮಜೀವಿಗಳಾದ ಬಯಲುಸೀಮೆಯ ಜನರಿಗೆ ನೀರನ್ನು ನೀಡಿದಲ್ಲಿ ಈ ಭಾಗ ಸುಭಿಕ್ಷವಾಗುತ್ತದೆ. ಹಲವಾರು ವರ್ಷಗಳಿಂದ ಹೋರಾಡುತ್ತಿದ್ದರೂ ಶಾಶ್ವತ ಯೋಜನೆಯನ್ನು ರೂಪಿಸದೇ ನಿರ್ಲಕ್ಷ್ಯ ಧೋರಣೆಯನ್ನು ತೋರುತ್ತಿರುವ ಸರ್ಕಾರದ ನಿಲುವನ್ನು ಖಂಡಿಸಿ ಪ್ರತಿಭಟಿಸುತ್ತಿದ್ದೇವೆ’ ಎಂದು ರೈತಮುಖಂಡರು ತಿಳಿಸಿದರು.
ತಾದೂರು ಮಂಜುನಾಥ್, ಮುನಿನಂಜಪ್ಪ, ಕೆ.ವಿ.ವೇಣುಗೋಪಾಲ್, ವೈ.ರಾಮಕೃಷ್ಣಪ್ಪ, ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -