ನಗರದಲ್ಲಿನ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಅಗತ್ಯವಾಗಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು. ಎಲ್ಲಾ ಸಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಪಾತವಿಲ್ಲದೆ ಅಭಿವೃದ್ಧಿಯ ಕಡೆಗೆ ಚಿಂತನೆ ನಡೆಸಲಾಗುತ್ತದೆ ಎಂದು ನಗರಸಭಾ ನೂತನ ಅಧ್ಯಕ್ಷ ಅಫ್ಸರ್ಪಾಷ ತಿಳಿಸಿದರು.
ನಗರದ ನಗರಸಭಾ ಕಾರ್ಯಾಲಯದಲ್ಲಿ ಗುರುವಾರ ಅಧಿಕಾರ ಸ್ವೀಕಾರ ಮಾಡಿ ಅವರು ಮಾತನಾಡಿದರು. ನಗರಸಭೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿಗಳ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದು, ಈ ಎಲ್ಲ ಸಮಸ್ಯೆಗಳನ್ನು ಸರಿಪಡಿಸಲು ಅಗತ್ಯವಾಗಿರುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ, ನಗರಸಭೆಗೆ ಬರಬೇಕಾಗಿರುವ ಆದಾಯವನ್ನು ಹೆಚ್ಚಿಸಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಗರಸಭೆಗೆ ಬರುವಂತಹ ಹೆಚ್ಚಿನ ಆದಾಯವನ್ನು ಪೌರಕಾರ್ಮಿಕರಿಗೆ ವೇತನ ಪಾವತಿ ಸೇರಿದಂತೆ ವಾಹನಗಳ ನಿರ್ವಹಣೆಗೆ ನೀಡಲಾಗುವುದು ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ನಗರವನ್ನು ಪ್ರವೇಶ ಮಾಡುವಲ್ಲಿ ಕಾಲುವೆಯು ತ್ಯಾಜ್ಯದ ನೀರಿನಿಂದ ತುಂಬಿದೆ. ಆ ಸ್ಥಳವನ್ನು ದುರಸ್ಥಿಗೊಳಿಸಲು ಶಾಸಕರ ಅನುಧಾನದಲ್ಲಿ ಸುಮಾರು ೭೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿದ್ದು, ಮುಂದಿನ ಹದಿನೈದು ದಿನಗಳಲ್ಲಿ ಕಾಮಗಾರಿಯನ್ನು ಪ್ರಾರಂಭ ಮಾಡಲಿದ್ದೇವೆ. ಗೌಡನಕೆರೆಗೆ ಹಾದುಹೋಗುವ ಕಾಲುವೆಯ ದುರಸ್ಥಿಗಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಕಾಮಗಾರಿ ಮಾಡಲು ಮನವಿ ಸಲ್ಲಿಸಲಾಗಿದೆ. ಕುಡಿಯುವ ನೀರಿಗಾಗಿ ನಗರದ ವ್ಯಾಪ್ತಿಯಲ್ಲಿ ಸುಮಾರು 10 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಾಡಲಾಗುತ್ತಿದೆ. ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಕೂಡಾ ನಗರಸಭೆಯ ಮೂಲಕ ಸ್ವಚ್ಚ ಭಾರತ ಅಭಿಯಾನ ಯೋಜನೆಯಡಿಯಲ್ಲಿ ಕ್ರಿಯಾ ಯೋಜನೆ ತಯಾರು ಮಾಡಲಾಗುತ್ತದೆ. ಆಶ್ರಯ ಸಮಿತಿಯಲ್ಲಿ ೨೨ ಎಕರೆಯನ್ನು ಗುರ್ತಿಸಿ ಸರ್ವೆ ಮಾಡಲಾಗಿದೆ. ಬಂದಿರುವ ಅರ್ಜಿಗಳಲ್ಲಿ ಫಲಾನುಭವಿಗಳನ್ನು ಗುರ್ತಿಸಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಆಯುಕ್ತ ಎಚ್.ಹರೀಶ್, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಕೋಚಿಮುಲ್ ನಿರ್ದೆಶಕ ಬಂಕ್ ಮುನಿಯಪ್ಪ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜು, ಡಾ.ಧನಂಜಯರೆಡ್ಡಿ, ಆಯುಕ್ತ ಎಚ್.ಎ.ಹರೀಶ್, ಸದಸ್ಯರಾದ ವೆಂಕಟಸ್ವಾಮಿ, ಸಂಧ್ಯಾ ಮಂಜುನಾಥ್, ಸುಮಿತ್ರಾ ರಮೇಶ್, ಸಿಕಂದರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.