ನಗರಸಭೆ ಮತ್ತು ಪೊಲೀಸರಿಂದ ಶಿಡ್ಲಘಟ್ಟ ನಗರ ಸೀಲ್ ಡೌನ್

0
102

ಶಿಡ್ಲಘಟ್ಟ ನಗರದಲ್ಲಿ ನಗರಸಭೆ ಹಾಗೂ ಪೊಲೀಸ್ ಇಲಾಖೆ ಜೊತೆಗೂಡಿ ಶುಕ್ರವಾರ ಸೀಲ್ ಡೌನ್ ಕಾರ್ಯವನ್ನು ಪ್ರಾರಂಭಿಸಿದರು.
ನಗರದ ಎರಡು ಪ್ರಮುಖ ರಸ್ತೆಗಳಾದ ಟಿ.ಬಿ.ರಸ್ತೆ ಹಾಗೂ ಅಶೋಕ ರಸ್ತೆಗಳಿಗೆ ಹೊಂದಿಕೊಂಡ ಎಲ್ಲಾ ಅಡ್ಡರಸ್ತೆಗಳಿಗೂ ಕೋಲುಗಳನ್ನು ಹಾಗೂ ಟೇಪನ್ನು ಅಡ್ಡವಾಗಿ ಕಟ್ಟುವ ಮೂಲಕ ವಾಹನ ಸಂಚಾರಕ್ಕೆ ನಿರ್ಬಂಧಿಸುವ ಕೆಲಸವನ್ನು ಮಾಡಿದರು. ಎಲ್ಲಾ ದಿಕ್ಕುಗಳಲ್ಲಿಯೂ ನಗರವನ್ನು ಪ್ರವೇಶಿಸುವ ಕಡೆ ಅಡೆತಡೆಗಳನ್ನು ಇರಿಸಿ ಅಲ್ಲಿ ಪೊಲೀಸರ ಮೂಲಕ ಪರಿಶೀಲನೆ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಮಾತನಾಡಿ, “ಅನಾವಶ್ಯಕವಾಗಿ ಓಡಾಡುವ ಜನರು ಹಾಗೂ ವಾಹನಗಳನ್ನು ನಿರ್ಬಂಧಿಸುವ ಸಲುವಾಗಿ ಈ ದಿನ ಮುಖ್ಯ ರಸ್ತೆಗಳನ್ನು ಹೊರತುಪಡಿಸಿ ಅಡ್ಡರಸ್ತೆಗಳನ್ನೆಲ್ಲಾ ಬಂದ್ ಮಾಡಿದ್ದೇವೆ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಂಡಿದ್ದು ಜನರು ಮನೆಗಳಲ್ಲಿಯೇ ಇದ್ದು ಸಹಕರಿಸಬೇಕು. ಮುಖ್ಯರಸ್ತೆಗಳಲ್ಲಿ ಪರಿಶೀಲನೆಗಾಗಿ ಪೊಲೀಸ್ ಕಾವಲು ಇರುತ್ತದೆ. ಅನಾವಶ್ಯಕವಾಗಿ ಓಡಾಡುವವರನ್ನು ತಡೆದು ಅವರ ವಾಹನವನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳಲಿದ್ದಾರೆ. ಅನಾವಶ್ಯಕವಾಗಿ ಓಡಾಡದಿರಿ. ಅತ್ಯವಶ್ಯಕ ವಸ್ತುಗಳಿಗೆ ಮಾತ್ರ ಹೊರಗೆ ಬನ್ನಿ” ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ತ್ಯಾಗರಾಜ್ ಮಾತನಾಡಿ, “ಗುಂಪುಗೂಡುವುದು, ಅನಗತ್ಯವಾಗಿ ಸಂಚರಿಸುವುದೂ ಹೆಚ್ಚಾಗಿತ್ತು. ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಜನರು ಅನಗತ್ಯವಾಗಿ ಸಂಚರಿಸುವುದನ್ನು ತಡೆಗಟ್ಟಲು ಎಲ್ಲಾ ಅಡ್ಡರಸ್ತೆಗಳನ್ನೂ ಮುಚ್ಚಲಾಗುತ್ತಿದೆ. ಮುಖ್ಯ ರಸ್ತೆಗಳಲ್ಲಿ ಕಾವಲು ಹಾಕಲಾಗುತ್ತಿದೆ. ಸಕಾರಣವಿದ್ದಲ್ಲಿ ಮಾತ್ರ ಹೊರಗೆ ಬನ್ನಿ, ಇಲ್ಲವಾದಲ್ಲಿ ಮನೆಯಲ್ಲಿಯೇ ಇರಿ” ಎಂದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!