ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಮಕ್ಕಳು ಮತ್ತು ನಗರದ ಪ್ರತಿಷ್ಟಿತ ಶಾಲೆಯ ವಿದ್ಯಾರ್ಥಿಗಳು ಒಂದೆಡೆ ಕಲೆತು, ವಿಚಾರ ವಿನಿಮಯ, ಚಟುವಟಿಕೆ, ಪರಸ್ಪರ ಸಹಾಯ ನಡೆಸುತ್ತಿರುವುದು ಅತ್ಯಂತ ಆಶಾದಾಯಕ ವಿಚಾರ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮಳ್ಳೂರು ಹರೀಶ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಳ್ಳೂರು ಸರ್ಕಾರಿ ಶಾಲೆಯಲ್ಲಿ ಮಂಗಳವಾರ ‘ನಮ್ಮ ಮುತ್ತೂರು’ ಸಂಸ್ಥೆ ಆಯೋಜಿಸಿದ್ದ ಬೆಂಗಳೂರಿನ ದಕ್ಷಿಣ ಭಾಗದ ದೆಹಲಿ ಪಬ್ಲಿಕ್ ಶಾಲೆಯ ಒಂಬತ್ತನೇ ತರಗತಿಯ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ನಡೆದ ಸ್ವಚ್ಛತಾ ಅಭಿಯಾನ, ವಿಚಾರ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರದ ವಿದ್ಯಾರ್ಥಿಗಳು ಗ್ರಾಮೀಣ ಸೊಗಡು, ಸಂಸ್ಕೃತಿಯ ಬಗ್ಗೆ ತಿಳಿದುಕೊಂಡರೆ, ಗ್ರಾಮೀಣ ಮಕ್ಕಳು ತಂತ್ರಜ್ಞಾನ, ಭಾಷೆಯ ಬಳಕೆ ಮೊದಲಾದ ವಿಚಾರಗಳನ್ನು ತಿಳಿದುಕೊಳ್ಳಬಹುದು. ಮೇಲು ಕೀಳು, ಬಡವ ಬಲ್ಲಿದ, ನಗರ ಗ್ರಾಮೀಣ ಎಂಬ ಬೇಧ ಭಾವ ಮಕ್ಕಳ ಮನಸ್ಸಿನಿಂದ ದೂರವಾಗುತ್ತದೆ. ಈ ರೀತಿಯ ಮಕ್ಕಳ ಸೇರ್ಪಡೆಗಳು, ಸಮ್ಮಿಲನಗಳು ಆಗಾಗ ನಡೆಯಬೇಕು. ಇದನ್ನು ಆಯೋಜಿಸಿದ ‘ನಮ್ಮ ಮುತ್ತೂರು’ ಸಂಸ್ಥೆಯವರ ಉದ್ದೇಶ ಅನುಕರಣೀಯ ಎಂದು ಹೇಳಿದರು.
ದೆಹಲಿ ಪಬ್ಲಿಕ್ ಶಾಲೆಯ ಒಂಬತ್ತನೇ ತರಗತಿಯ 64 ಮಂದಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ತಮ್ಮ ಮೂವರು ಶಿಕ್ಷಕರೊಂದಿಗೆ ಶಾಲೆಯ ಆವರಣದಲ್ಲಿ ತರಕಾರಿಗಳನ್ನು ಬೆಳೆಯಲು ಭೂಮಿಯನ್ನು ಹದ ಮಾಡಿದರು. ಮಳ್ಳೂರು ಗ್ರಾಮದಲ್ಲಿ ಕಸವನ್ನು ವಿಲೇವಾರಿ ಮಾಡಿದರು. ನಂತರ ಹಿಪ್ಪುನೇರಳೆ ತೋಟ, ರೇಷ್ಮೆ ಗೂಡಿನ ರೂಪುಗೊಳ್ಳುವಿಕೆಯ ವಿವಿಧ ಹಂತಗಳಾದ ಚಾಕಿ, ಹುಳು ಸಾಕಾಣಿಕೆಯನ್ನು ವೀಕ್ಷಿಸಿ ಪ್ರಗತಿಪರ ರೈತ ಹರೀಶ್ ಅವರಿಂದ ಮಾಹಿತಿ ಪಡೆದರು. ಬೆಂಗಳೂರಿನಿಂದ ತಾವು ತಂದಿದ್ದ ಪುಸ್ತಕಗಳು, ಬಣ್ಣದ ಪೆನ್ಸಿಲ್‌ಗಳು, ಆಟಿಕೆಗಳನ್ನು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡಿದರು. ನಾಲ್ಕು ಅಂಗನವಾಡಿಗಳ ಮಕ್ಕಳಿಗೆ ಆಟಿಕೆಗಳನ್ನು ನೀಡಿದರು. ಮುತ್ತೂರು ಗ್ರಾಮದ ಮಹಿಳಾ ಹೊಲಿಗೆ ಕೇಂದ್ರಕ್ಕೂ ಭೇಟಿ ನೀಡಿ ಸ್ವಾವಲಂಬಿ ಗ್ರಾಮೀಣ ಮಹಿಳೆಯರ ಬಗ್ಗೆ ತಿಳಿದುಕೊಂಡರು.
ಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಮ್ಮ, ಉಪಾಧ್ಯಕ್ಷ ಗೋಪಾಲಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧಾ, ‘ನಮ್ಮ ಮುತ್ತೂರು’ ಸಂಸ್ಥೆಯ ಉಷಾಶೆಟ್ಟಿ, ಬಿ.ವಿರೂಪಾಕ್ಷಪ್ಪ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷೆ ಸೌಮ್ಯ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -