ನಾನೊಬ್ಬ ಸಾಮಾನ್ಯ ರೈತ, ನನ್ನ ಬಳಿ ಕೋಟಿಗಟ್ಟಲೇ ಹಣವಿಲ್ಲ, ನೂರಾರು ಎಕರೆ ಜಮೀನಿಲ್ಲ, ಆದರೂ ಸತತವಾಗಿ ಹತ್ತು ವರ್ಷಗಳಿಂದ ಹಲವು ಮುಖಂಡರೊಟ್ಟಿಗೆ ಪಕ್ಷ ಕಟ್ಟಿದ್ದೇನೆ. ನನಗೆ ರಾಜಕೀಯ ಶಕ್ತಿ ಕೊಡಿ ನಾನು ಜೀವ ಇರೋವರೆಗೂ ನಿಮ್ಮ ಸೇವೆ ಮಾಡುತ್ತೇನೆ ಎಂದು ಎಚ್.ಡಿ.ಡಿ ಮತ್ತು ಜೆ.ಪಿ.ಎಸ್ ಸೇವಾಭಿವೃದ್ಧಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮೇಲೂರು ಬಿ.ಎನ್.ರವಿಕುಮಾರ್ ತಿಳಿಸಿದರು.
ಜೆ.ಡಿ.ಎಸ್.ಪಕ್ಷ ಟಿಕೆಟ್ ಕೊಟ್ಟರೆ ಆ ಪಕ್ಷ ದಿಂದ ಸ್ಪರ್ದಿಸುವೆ ಇಲ್ಲವಾದರೆ, ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸುವೆ. ನಾನು ಮಾಡಿರುವ ಸೇವೆ ಗುರ್ತಿಸಿ ಆಶಿರ್ವದಿಸಿ. ಮಾಜಿ ಸಚಿವ ವಿ.ಮುನಿಯಪ್ಪ ಅವರನ್ನು ಎದುರು ಹಾಕಿಕೊಂಡು, ಚುನಾವಣೆ ಮಾಡಿದ್ದೇವೆ. ಹಾಲಿ ಶಾಸಕ ಎಂ.ರಾಜಣ್ಣ ಅವರನ್ನು ಗೆಲ್ಲಿಸಿಕೊಂಡಿದ್ದೇವೆ. ಇದನ್ನು ಅರ್ಥ ಮಾಡಿಕೊಳ್ಳದೆ ಶಾಸಕರು, ಪಕ್ಷಕ್ಕೆ ನಿಷ್ಠಾವಂತರಾಗಿ ದುಡಿದು ಪಕ್ಷ ಕಟ್ಟಿದ ಹಲವಾರು ಮುಖಂಡರನ್ನು ಕಡೆಗಣಿಸಿ, ಪಕ್ಷವನ್ನು ಹಾಳು ಮಾಡುತ್ತಿರುವುದು ಗಮನಕ್ಕೆ ಬಂದ ನಂತರ ಅವರ ವಿರುದ್ಧ ಸೆಟೆದು ನಿಲ್ಲಬೇಕಾಯಿತು.
ಶಾಸಕ ಎಂ.ರಾಜಣ್ಣ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಗೆಲ್ಲುವುದಿಲ್ಲ. ಜನರ, ಕಾರ್ಯಕರ್ತರ ವಿಶ್ವಾಸಗಳಿಸದವರು ಗೆಲುವು ಸಾಧಿಸುವುದಿಲ್ಲ. ಮಾಜಿ ಶಾಸಕ ವಿ.ಮುನಿಯಪ್ಪ ನವರು 35 ವರ್ಷಗಳ ಕಾಲದ ಅಧಿಕಾರವಧಿಯಲ್ಲಿ ಹಲವು ಮುಖಂಡರ ರಾಜಕೀಯ ಬದುಕನ್ನು ಹಾಳು ಮಾಡಿದರು ಎಂದು ಆರೋಪಿಸಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಬಿ.ಎನ್.ರವಿಕುಮಾರ್ ಅವರಿಗೆ ಪಕ್ಷದಿಂದ ಬಿ.ಫಾರಂ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಅನಿವಾರ್ಯವಾಗಲಿದೆ. ಬಿ.ಎನ್.ರವಿಕುಮಾರ್ ಅವರಿಗೆ ಬಿ.ಫಾರಂ ನೀಡಬೇಕು ಎಂದು ವರಿಷ್ಟರಿಗೆ ಮನವಿ ಮಾಡಿಕೊಂಡಿದ್ದೆವು, ಪಕ್ಷದಿಂದ ಹಾಲಿ ಶಾಸಕರ ಹೆಸರು ಘೋಷಣೆ ಮಾಡಲಾಗಿದೆ. ಪಕ್ಷದಿಂದ ಟಿಕೆಟ್ ನೀಡದಿದ್ದರೂ ರವಿಕುಮಾರ್ ಸ್ಪರ್ಧಿಸುತ್ತಾರೆ. ಅವರಿಗೆ ಮತ ನೀಡಿ ಎಂದರು.
ಹುಜುಗೂರು ರಾಮಣ್ಣ ಮಾತನಾಡಿ, ನಮಗೆ ಚಿಹ್ನೆ ಮುಖ್ಯವಲ್ಲ, ಜನಶಕ್ತಿ ಮುಖ್ಯವಾಗಿದೆ. ಮುಂದಿನ ಚುನಾವಣೆಯಲ್ಲಿ ರವಿಕುಮಾರ್ ಅವರಿಗೆ ಯಾವುದೇ ಗುರ್ತು ನೀಡಿದರೂ ಅವರಿಗೆ ಮತ ಕೊಡಿ ಎಂದರು.
ರವಿಕುಮಾರ್ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಕರೆ ತರಲಾಯಿತು. ಶಿಡ್ಲಘಟ್ಟದಿಂದ ದಿಬ್ಬೂರಹಳ್ಳಿವರೆಗೂ ಹಳ್ಳಿಗಳ ಗೇಟ್ ನಲ್ಲಿ ಸ್ವಾಗತ ಕೋರಲು ನಿಂತಿದ್ದ ಕಾರ್ಯಕರ್ತರು. ಪಟಾಕಿಗಳನ್ನು ಸಿಡಿಸಿ, ಹಾರಗಳನ್ನು ಹಾಕಿ ಸ್ವಾಗತಿಸಿದರು.
ಚೀಮನಹಳ್ಳಿ ಗೋಪಾಲ್ ಸೇರಿದಂತೆ ಹಲವಾರು ಮಂದಿ ಕಾಂಗ್ರೆಸ್ ತೊರೆದು ಮೇಲೂರು ರವಿಕುಮಾರ್ ಅವರ ಜೊತೆಗೆ ಸೇರ್ಪಡೆಯಾದರು. ಸಹಸ್ರಾರು ಸಂಖ್ಯೆಯಲ್ಲಿ ರವಿಕುಮಾರ್ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಎಚ್.ಡಿ.ಡಿ ಮತ್ತು ಜೆ.ಪಿ.ಎಸ್ ಸೇವಾಭಿವೃದ್ಧಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶಿಡ್ಲಘಟ್ಟ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ 200 ಕೂಲಿ ಕಾರ್ಮಿಕರಿಗೆ ಸೈಕಲ್‌ಗಳು, ಕ್ಷೇತ್ರದ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ 250 ಹೊಲಿಗೆ ಯಂತ್ರಗಳು, ಅಂಗವಿಕಲರಿಗೆ 165 ವೀಲ್‌ಚೇರುಗಳು, 100 ಟ್ರೈಸೈಕಲ್‌ಗಳು, ಅಂಧರಿಗೆ ವಾಕಿಂಗ್ ಸ್ಟಿಕ್‌ಗಳು ಮತ್ತು ಸೆನ್ಸಾರ್‌ಕಿಟ್‌ಗಳು, ಕಾಲಿನ ತೊಂದರೆಯವರಿಗೆ 100 ಎಲ್ಬೋ ಕ್ಲಚಸ್ ಮತ್ತು 100 ಕ್ಲಚಸ್‌ಗಳು, ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ 50 ವಾಟರ್‌ಬೆಡ್‌ಗಳು, ಬುದ್ದಿ ಮಾಂದ್ಯರಿಗೆ ಎಂ.ಆರ್.ಕಿಟ್‌ಗಳನ್ನು ವಿತರಣೆ ಮಾಡಲಾಯಿತು.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಶಿವಾರೆಡ್ಡಿ, ಪಿ.ವಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾರಘು, ನಗರಸಭೆ ಸದಸ್ಯೆ ಸಂಧ್ಯಾಮಂಜುನಾಥ್, ಮುಖಂಡರಾದ ಕೇಶವಮೂರ್ತಿ, ರತ್ನಯ್ಯ, ರಾಜಣ್ಣ, ಕದಿರಿ ಯೂಸುಫ್, ಸಮೀಉಲ್ಲಾ, ಸೈಯ್ಯದ್, ಮುಗಿಲಡಿಪಿ ನಂಜಪ್ಪ, ಕೆ.ಎಸ್.ಮಂಜುನಾಥ್, ಯೋಗಾನಂದ್ ಹಾಜರಿದ್ದರು.
- Advertisement -
- Advertisement -
- Advertisement -