22.1 C
Sidlaghatta
Monday, October 27, 2025

ನಮ್ಮ ಕುಟುಂಬದಂತೆ ಶಾಲೆ ಎಂಬ ಭಾವ

- Advertisement -
- Advertisement -

ಶಾಲೆಯಲ್ಲಿ ಗ್ರಂಥಾಲಯ, ಕ್ರೀಡಾ ಕೊಠಡಿ, ಕಂಪ್ಯೂಟರ್ ಕೊಠಡಿ, ಶಾಲೆಯ ಮುಂದಿನ ಉದ್ಯಾನವನ, ನೀರಿನ ಉಸ್ತುವಾರಿ, ಶಿಸ್ತು, ಸಮಯಪಾಲನೆ, ಔಷಧಿ ಮುಂತಾದ ಹಲವು ಸಂಗತಿಗಳನ್ನು ಸದಾ ಗಮನಿಸಬೇಕಾಗುತ್ತವೆ.
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಎಲ್ಲಾ ವಿಷಯಗಳಲ್ಲೂ ವಿದ್ಯಾರ್ಥಿಗಳೇ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಶಾಲೆಯು ತಮ್ಮ ಕುಟುಂಬದ ಹಾಗೆ ಎಂಬ ಭಾವನೆ ಬರುವಂತೆ ವಿದ್ಯಾರ್ಥಿಗಳಿಗೆ ಶಿಕ್ಷಕರು ವಿವಿಧ ಜವಾಬ್ದಾರಿಗಳನ್ನು ನೀಡುವುದರೊಂದಿಗೆ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಶಾಲೆಯ ಆವರಣವಲ್ಲಿ ನೂರಕ್ಕೂ ಹೆಚ್ಚು ಗಿಡಗಳಿವೆ. ಶಾಲೆಯಲ್ಲಿ ನೂರು ಮಕ್ಕಳಿದ್ದಾರೆ. ಆಗಾಗ ನಡೆಯುವ ಕಂಪ್ಯೂಟರ್ ಮೂಲಕ ಪಠ್ಯಕ್ಕೆ ಸಂಬಂಧಿಸಿದ ಚಿತ್ರ ಪ್ರದರ್ಶನ, ಔಷಧಿ ವಿತರಣೆ, ಪ್ರತಿದಿನ ಬೇಕಾಗುವ ಆಹಾರ ಸಾಮಗ್ರಿ, ಶಿಸ್ತು, ಸಮಯಪಾಲನೆ, ಕುಡಿಯಲು ಹಾಗೂ ಶೌಚಾಲಯಕ್ಕೆ ಬೇಕಾಗುವ ನೀರಿನ ನಿರ್ವಹಣೆ, ಗೋಡೆ ಬರಹದ ಪತ್ರಿಕೆ ‘ಇಂಚರ’ದ ನಿರ್ವಹಣೆ ಮುಂತಾದ ಹಲವಾರು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ.
ಆದರೆ ವಿವಿಧ ವಿಭಾಗಗಳ ಜವಾಬ್ದಾರಿಯನ್ನು ಹೊರಲು ವಿದ್ಯಾರ್ಥಿಗಳಲ್ಲಿ ಪೈಪೋಟಿ ಇರುವ ಕಾರಣ, ಒಂದೊಂದು ವಿಭಾಗಕ್ಕೂ ಒಂದೊಂದು ಖಾತೆ ಎಂದು ಹೆಸರಿಟ್ಟು ಈಚೆಗೆ ಶಾಲಾ ಮಂತ್ರಿ ಮಂಡಲದ ಚುನಾವಣೆಯನ್ನು ನಡೆಸಲಾಯಿತು. ಶಿಕ್ಷಣ ಮಂತ್ರಿ, ಆರೋಗ್ಯ ಮಂತ್ರಿ, ಆಹಾರ ಮಂತ್ರಿ, ಕಾನೂನು ಮಂತ್ರಿ, ಗ್ರಂಥಾಲಯ ಮಂತ್ರಿ, ಕ್ರೀಡಾ ಮಂತ್ರಿ, ಶಿಸ್ತು ಮತ್ತು ಜವಾಬ್ದಾರಿ, ಕಲೆ ಮತ್ತು ಸಂಸ್ಕೃತಿ, ನೀರಾವರಿ, ನೈರ್ಮಲ್ಯ, ಸಮಯಪಾಲನೆ ಮತ್ತು ಮುಖ್ಯಮಂತ್ರಿ ಎಂದು ವಿಂಗಡಿಸಲಾಗಿತ್ತು.
ತಮ್ಮ ಆಸಕ್ತ ವಿಷಗಳಿಗೆ ವಿದ್ಯಾರ್ಥಿಗಳು ಸ್ಪರ್ಧಿಸಿದರು. ನಾಮಪತ್ರಗಳನ್ನು ಸಲ್ಲಿಸಿದರು. ಕೆಲವರು ವಾಪಸ್ ಕೂಡ ಪಡೆದರು. ಚುನಾವಣೆಗೆ ಸ್ಪರ್ಧಿಸಿದವರು ತಮ್ಮ ಖಾತೆಯನ್ನು ಸಮರ್ಪಕವಾಗಿ ಹೇಗೆ ನಿರ್ವಹಿಸುತ್ತೇವೆಂದು ವಿವರಿಸಿ ಮತಯಾಚಿಸಿದರು. ವಿದ್ಯಾರ್ಥಿಗಳು ತಮ್ಮ ಆಯ್ಕೆಯನ್ನು ಸಾಲಾಗಿ ನಿಂತು ಮತದಾನ ಮಾಡುವ ಮೂಲಕ ತಿಳಿಸಿದರು.
‘ಶಾಲೆಯು ಮಕ್ಕಳಿಗೆ ಮನಸ್ಸಿನ ಹೊರಗಿರಬಾರದು. ಅವರ ಮನೆಯಂತೆ, ಕುಟುಂಬದಂತೆ ಅವರು ಪ್ರೀತಿಸಬೇಕು ಮತ್ತು ಪರಿಭಾವಿಸಬೇಕು. ಅದರೊಂದಿಗೆ ಶಾಲೆಯಲ್ಲಿ ಮಕ್ಕಳಿಗೆ ಎಲ್ಲ ವಿಷಯಗಳ ಬಗ್ಗೆಯೂ ತಿಳುವಳಿಕೆ ಕೂಡ ಇರಬೇಕು. ಗ್ರಂಥಾಲಯದ ನಿರ್ವಹಣೆಯಿಂದ ಔಷಧಿ, ನೀರಿನ ಬಗ್ಗೆಯೂ ಅವರಿಗೆ ಗೊತ್ತಾಗಬೇಕು. ಅವರಿಗೇ ಜವಾಬ್ದಾರಿ ನೀಡುವುದರಿಂದ ಪಠ್ಯಕ್ಕೆ ಹೊರತಾದ ವ್ಯವಹಾರ ಜ್ಞಾನ, ನಿರ್ವಹಣೆಯ ಕಲೆ ಅವರಿಗೆ ಸಿದ್ಧಿಸುತ್ತದೆ. ಹೆಣ್ಣುಮಕ್ಕಳೂ ಗಂಡುಮಕ್ಕಳ ಸಮನಾಗಿ ನಮ್ಮ ಶಾಲೆಯಲ್ಲಿ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ. ಶಾಲೆಯ ಕಾರ್ಯಕ್ರಮಗಳಲ್ಲಿ ಅವರೇ ಸ್ವಾಗತ, ನಿರೂಪಣೆ ನಡೆಸುತ್ತಾರೆ. ನಾವು ಮಾರ್ಗದರ್ಶನ ನೀಡುತ್ತಾ ಕೆಲವೊಮ್ಮ ಅವರ ಆಲೋಚನೆ, ದೂರದರ್ಶಿತ್ವಕ್ಕೆ ಬೆರಗಾಗುತ್ತೇವೆ’ ಎಂದು ಶಿಕ್ಷಕ ನಾಗಭೂಷಣ್ ತಿಳಿಸಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!