ತಾಲ್ಲೂಕಿನಾದ್ಯಂತ ಫೆಬ್ರುವರಿ 13 ರಂದು ನಡೆಯಲಿರುವ ತಾಲ್ಲೂಕಿನ 5 ಜಿಲ್ಲಾ ಪಂಚಾಯತಿ ಮತ್ತು 17 ತಾಲ್ಲೂಕು ಪಂಚಾಯತಿ ಕ್ಷೇತ್ರಗಳ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಿದ್ದ ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲನೆ ಮಂಗಳವಾರ ನಡೆಯಿತು.
ಐದು ಜಿಲ್ಲಾ ಪಂಚಾಯತಿ ಸ್ಥಾನಗಳಿಗೆ 36 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಒಂದು ನಾಮಪತ್ರ ತಿರಸ್ಕೃತಗೊಂಡಿದೆ. ದಿಬ್ಬೂರಹಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಕೊಂಡರಾಜನಹಳ್ಳಿ ಕೆ.ವಿ.ಶ್ರೀನಾಥ ಅವರ ನಾಮಪತ್ರ ತಿರಸ್ಕೃತವಾಗಿದೆ. 17 ತಾಲ್ಲೂಕು ಪಂಚಾಯತಿ ಸ್ಥಾನಗಳಿಗೆ 66 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಎಲ್ಲವೂ ಅಂಗೀಕೃತವಾಗಿವೆ.
‘ಒಟ್ಟು 169 ಮತಗಟ್ಟೆಗಳಿವೆ. ಫೆಬ್ರುವರಿ 8 ರಂದು ಮತಗಟ್ಟೆ ಸಿಬ್ಬಂದಿಗೆ ತರಬೇತಿ ನೀಡಲಿದ್ದು, ಚುನಾವಣೆಯು ಶಾಂತಯುತವಾಗಿ ನಡೆಯಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ತಹಶೀಲ್ದಾರ್ ಕೆ.ಎಂ.ಮನೋರಮಾ ತಿಳಿಸಿದ್ದಾರೆ.
ಕಾಂಗ್ರೆಸ್ ಬಂಡಾಯ: ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಹಾಗೂ ಸಂಸದ ಕೆ.ಎಚ್.ಮುನಿಯಪ್ಪ, ಹಿರಿಯ ಕಾಂಗ್ರೆಸ್ ಮುಖಂಡರ ಮಧ್ಯಸ್ತಿಕೆಯಲ್ಲಿ ಒಂದಾದರೂ ಜಿಲ್ಲಾ ಪಂಚಾಯತಿಯ ಮೂರು ಕ್ಷೇತ್ರಗಳಲ್ಲಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ. ದಿಬ್ಬೂರಹಳ್ಳಿ ಕ್ಷೇತ್ರದಲ್ಲಿ ಓಬಳಪ್ಪ, ಗಂಜಿಗುಂಟೆ ಕ್ಷೇತ್ರದಲ್ಲಿ ದೊಗರನಾಯಕನಹಳ್ಳಿ ವೆಂಕಟೇಶ್, ಅಬ್ಲೂಡು ಕ್ಷೇತ್ರದಲ್ಲಿ ತಾತಹಳ್ಳಿ ನರಸಿಂಹಯ್ಯ ಮತ್ತು ಶಿವಮೂರ್ತಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಸಿ.ಪಿ.ಎಂ ನ ಏಕೈಕ ಅಭ್ಯರ್ಥಿ: ಸಿ.ಪಿ.ಐ.ಎಂ ಪಕ್ಷದಿಂದ ಗಂಜಿಗುಂಟೆ ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ಸದಾನಂದ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಜಿ.ಪಂ. ಕಾಂಗ್ರೆಸ್ ಅಭ್ಯರ್ಥಿಗಳು: ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ವಿನುತಾ ಶ್ರೀನಿವಾಸ್ ಚೀಮಂಗಲ ಕ್ಷೇತ್ರಕ್ಕೆ ನಾಮಪತ್ರವನ್ನು ಸಲ್ಲಿಸಿದರು. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್ ದಿಬ್ಬೂರಹಳ್ಳಿ ಕ್ಷೇತ್ರ, ಗೋಪಾಲರೆಡ್ಡಿ ಗಂಜಿಗುಂಟೆ ಕ್ಷೇತ್ರ, ವೆಂಕಟೇಶಪ್ಪ ಅಬ್ಲೂಡು ಕ್ಷೇತ್ರ ಮತ್ತು ನಿರ್ಮಲಾ ಮುನಿರಾಜು ಜಂಗಮಕೋಟೆ ಕ್ಷೇತ್ರಕ್ಕೆ ನಾಮಪತ್ರವನ್ನು ಸಲ್ಲಿಸಿದರು.
ಜಿ.ಪಂ. ಜೆಡಿಎಸ್ ಅಭ್ಯರ್ಥಿಗಳು: ತನುಜಾ ರಘು ಚೀಮಂಗಲ ಕ್ಷೇತ್ರ, ಚಿಕ್ಕನರಸಿಂಹಪ್ಪ ದಿಬ್ಬೂರಹಳ್ಳಿ ಕ್ಷೇತ್ರ, ಡಾ.ಜಯರಾಮರೆಡ್ಡಿ ಗಂಜಿಗುಂಟೆ ಕ್ಷೇತ್ರ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಅಬ್ಲೂಡು ಕ್ಷೇತ್ರ ಮತ್ತು ನಳಿನಾ ಮಂಜುನಾಥ್ ಜಂಗಮಕೋಟೆ ಕ್ಷೇತ್ರಕ್ಕೆ ನಾಮಪತ್ರವನ್ನು ಸಲ್ಲಿಸಿದರು.
ಆಮ್ ಆದ್ಮಿ ಬೆಂಬಲಿತ ಅಭ್ಯರ್ಥಿ: ಪಲಿಚೇರ್ಲು ತಾಲ್ಲೂಕು ಪಂಚಾಯತಿ ಕ್ಷೇತ್ರಕ್ಕೆ ಕನ್ನಂಪಲ್ಲಿ ನಾಗರತ್ನಮ್ಮ ಎಂಬುವವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು, ಆಮ್ ಆದ್ಮಿ ಪಕ್ಷವು ಇವರನ್ನು ಬೆಂಬಲಿಸುತ್ತಿದೆ.
ಸರ್ವೋದಯ ಕರ್ನಾಟಕ ಪಕ್ಷ ಮತ್ತು ಸಮಾಜವಾದಿ ಪಕ್ಷ ಕಣಕ್ಕೆ:ಸಾದಲಿಯ ಎಸ್.ಡಿ.ಶ್ರೀನಿವಾಸ್ ದಿಬ್ಬೂರಹಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದಿಂದ ಕಣಕ್ಕಿಳಿದಿದ್ದರೆ, ಸಾದಲಿಯ ಎಸ್.ವಿ.ಶ್ರೀನಿವಾಸ್ ಸಮಾಜವಾದಿ ಪಕ್ಷದಿಂದ ಕಣದಲ್ಲಿದ್ದಾರೆ.
- Advertisement -
- Advertisement -
- Advertisement -
- Advertisement -