ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನೀಲಗಿರಿ ಮುಕ್ತ ತಾಲ್ಲೂಕು ಮಾಡುವ ನಿಟ್ಟಿನಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಪಿಡಿಒಗಳೊಂದಿಗಿನ ಸಭೆಯಲ್ಲಿ ತಹಶಿಲ್ದಾರ್ ಎಂ.ದಯಾನಂದ್ ಮಾತನಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯನ್ನು ನೀಲಗಿರಿ ಮುಕ್ತವನ್ನಾಗಿ ಮಾಡಲು ಸಮಗ್ರ ಯೊಜನೆಯನ್ನು ಸಿದ್ಧಪಡಿಸಲಾಗಿದೆ. ಅದರಂತೆ ಪ್ರತಿ ತಾಲ್ಲೂಕಿನ ತಹಶಿಲ್ದಾರ್, ಕಾರ್ಯನಿರ್ವಾಹಣಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಯೋಗದಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ ಎಂದು ಅವರು ತಿಳಿಸಿದರು.
ಇಡುವಳಿಗಳು ಮತ್ತು ಸರ್ಕಾರಿ ಎರಡೂ ಜಾಗಗಳಲ್ಲಿ ನೀಲಗಿರಿ ಮರಗಳಿವೆ. ಇಡುವಳಿ ಅಥವಾ ಸ್ವಂತ ಜಾಗಗಳಲ್ಲಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಲು ಒಂದು ತಿಂಗಳ ಕಾಲಾವಕಾಶವನ್ನು ಜಿಲ್ಲಾಧಿಕಾರಿ ಅವರು ನೀಡಿದ್ದಾರೆ. ಫೆಬ್ರುವರಿ ತಿಂಗಳು ಮುಗಿಯುವಷ್ಟರಲ್ಲಿ ರೈತರು ತಮ್ಮ ಜಾಗಗಳಿಂದ ತೆರವುಗೊಳಿಸಬೇಕು. ಇದಕ್ಕೆ ಅರಣ್ಯ ಇಲಾಖೆಯಿಂದ ಯಾವುದೇ ನಿರ್ಬಂಧವಾಗಲೀ, ಅಡೆತಡೆಯಾಗಲೀ ಇರುವುದಿಲ್ಲ. ಅಕಸ್ಮಾತ್ ರೈತರು ತಮ್ಮ ಜಮೀನುಗಳಲ್ಲಿನ ನೀಲಗಿರಿ ಮರಗಳನ್ನು ತೆರವುಗೊಳಿಸದಿದ್ದರೆ ಜಿಲ್ಲಾಧಿಕಾರಿಗಳು ಅವರ ಜಮೀನನ್ನು ಆರ್.ಟಿ.ಸಿ ಯಲ್ಲಿ ಬೀಳು ಎಂದು ನಮೂದಿಸುತ್ತಾರೆ. ಆದ್ದರಿಂದ ಪರಿಸರಕ್ಕೆ ನಿಮ್ಮ ಕಾಣ್ಕೆಯನ್ನು ನೀಲಗಿರಿ ತೆರವು ಮಾಡುವ ಮೂಲಕ ನೀಡಿ ಎಂದರು.
ಸರ್ಕಾರಿ ಜಾಗಗಳಲ್ಲಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಲು ನಾವೆಲ್ಲರೂ ಒಂದು ತಂಡವಾಗಿ ಕೆಲಸ ಮಾಡಬೇಕು. ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿಯೂ ಪಿಡಿಒಗಳು ಕಾರ್ಯತತ್ಪರರಾಗಿ ಕೆಲಸ ಮಾಡಬೇಕು. ಸ್ಥಳೀಯವಾಗಿಯೇ ಜನಪ್ರತಿನಿಧಿಗಳನ್ನು ಹಾಗೂ ಗ್ರಾಮಸ್ಥರನ್ನು ಮನವೊಲಿಸಿ ಪಿಡಿಒಗಳು ಯೋಜನೆಗಳನ್ನು ರೂಪಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಿವಕುಮಾರ್, ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ ಹಾಜರಿದ್ದರು.
- Advertisement -
- Advertisement -
- Advertisement -