ತಾಲ್ಲೂಕಿನಲ್ಲಿ ಸಂತೆ ಅಥವಾ ಜಾತ್ರೆ ನಡೆಯುವ, ಜನ ಸಂದಣಿ ಸೇರುವ ಸ್ಥಳಗಳಲ್ಲಿ ನೈರ್ಮಲ್ಯೀಕರಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಂಗಮಕೋಟೆ ಕ್ರಾಸ್ನಲ್ಲಿ 30 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ಶೌಚಾಲಯ ಸಂಕೀರ್ಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಘಟಮಾರನಹಳ್ಳಿ ಕ್ರಾಸ್ ಎಂದು ಕರೆಯುವ ಜಂಗಮಕೋಟೆ ಕ್ರಾಸ್ನಲ್ಲಿ ಪ್ರತಿ ಮಂಗಳವಾರ ಜಾತ್ರೆ ನಡೆಯುವುದರಿಂದ ಅಪಾರ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಈ ಭಾಗದಲ್ಲಿ ಇದು ಕೇಂದ್ರ ಸ್ಥಾನವಾಗಿದ್ದು, ಇಲ್ಲಿಂದ ಚಿಕ್ಕಬಳ್ಳಾಪುರ, ಕೋಲಾರ, ಹೊಸಕೋಟೆ, ಬೆಂಗಳೂರು, ವಿಜಯಪುರಕ್ಕೆ ಜನರು ಪ್ರಯಾಣಿಸುತ್ತಾರೆ. ಮಹಿಳೆಯರು ಮತ್ತು ಮಕ್ಕಳಿಗೆ ಶೌಚಾಲಯ ವ್ಯವಸ್ಥೆಯಿಲ್ಲದೇ ಸಾಕಷ್ಟು ತೊಂದರೆಯಾಗಿತ್ತು. ಈಗ ಬೆಂಗಳೂರು ಮಾದರಿಯ ಸುಸಜ್ಜಿತ ಶೌಚಾಲಯವನ್ನು ನಿರ್ಮಿಸಲಾಗಿದೆ. ಗ್ರಾಮ ಪಂಚಾಯತಿ ವತಿಯಿಂದ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಶೌಚಾಲಯವನ್ನು ಸ್ವಚ್ಛವಾಗಿರಿಸಲು ಸಹಕರಿಸಬೇಕು ಎಂದು ಹೇಳಿದರು.
ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ದಿಬ್ಬೂರಹಳ್ಳಿ, ವೈ.ಹುಣಸೇನಹಳ್ಳಿ, ಮೇಲೂರು, ಎಚ್.ಕ್ರಾಸ್ ಮುಂತಾದೆಡೆ ಶೌಚಾಲಯಗಳ ಅಗತ್ಯವಿದೆ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಅತಿ ಶೀಘ್ರದಲ್ಲಿ ಎಲ್ಲೆಡೆ ಸುಸಜ್ಜಿತ ಶೌಚಾಲಯಗಳ ನಿರ್ಮಾಣ ಮಾಡಲಾಗುವುದು ಎಂದರು.
ತಾದೂರು ರಮೇಶ್, ಶ್ರೀನಿವಾಸಗೌಡ, ರಘು, ಮುನೇಗೌಡ, ಜಗದೀಶ್, ನಂಜೇಗೌಡ, ರಮೇಶ್, ನಾಗಭೂಷಣ್, ಕೆಂಪರೆಡ್ಡಿ, ಲಕ್ಷ್ಮಣಮೂರ್ತಿ, ರಾಜಶೇಖರ್, ನಾರಾಯಣಸ್ವಾಮಿ, ಮಂಜುನಾಥ್, ಲಕ್ಷ್ಮೀನಾರಾಯಣ್, ವೀರಪ್ಪ, ಮಾರೇಗೌಡ, ಶ್ರೀನಿವಾಸ, ಮುನಿಕೃಷ್ಣ, ಬಾಬು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -