ತಾಲ್ಲೂಕಿನಾದ್ಯಂತ ನೂರಾರು ಮಂದಿ ನಿರ್ಗತಿಕರು, ಬಡವರು ಇದ್ದಾರೆ. ಅವರಿಗೆ ನ್ಯಾಯಪರ ವೇದಿಕೆಯ ಸದಸ್ಯರು ಪ್ರತಿದಿನ ಉತ್ತಮ ಗುಣಮಟ್ಟದ ಆಹಾರವನ್ನು ಕೊಡುತ್ತಿದ್ದಾರೆ ಎಂದು ತಹಶೀಲ್ದಾರ್ ಕೆ.ಅರುಂಧತಿ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಂಗಳವಾರ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬರುವವರಿಗೆ ಅನುಕೂಲವಾಗಲೆಂದು ನ್ಯಾಯಪರ ವೇದಿಕೆ ವತಿಯಿಂದ ನೀಡಲಾದ 30 ಲೀಟರ್ ಸ್ಯಾನಿಟೈಜರ್ ಮತ್ತು ಒಂದು ಸಾವಿರ ಮಾಸ್ಕ್ ಗಳನ್ನು ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಇರುವವರು ಇಲ್ಲದವರು ಎಲ್ಲರೂ ಇರುತ್ತಾರೆ. ಆದರೆ ಅವಶ್ಯಕವಿರುವವರಿಗೆ, ಹಸಿದವರಿಗೆ ಆಹಾರ ನೀಡುವುದು ಕರ್ತವ್ಯವಾಗುತ್ತದೆ. ತಾಲ್ಲೂಕಿನಲ್ಲಿ ಊಟದ ತೊಂದರೆಯಿರುವವರನ್ನು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ನಗರದ ವ್ಯಾಪ್ತಿಯಲ್ಲಿ ಗುರುತಿಸಿದ್ದು, ಅವರಿಗೆ ಸಾಮಾಜಿಕ ಕಳಕಳಿಯುಳ್ಳ ಯುವಕರ ಮೂಲಕ ಆಹಾರವನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ನ್ಯಾಯಪರ ವೇದಿಕೆಯ ಬೆಂಗಳೂರು ಗ್ರಾಮಾಂತರ ಘಟಕದ ಅಧ್ಯಕ್ಷ ಭರತ್ ಮಾತನಾಡಿ, ಲಾಕ್ ಡೌನ್ ಮುಗಿಯುವವರೆಗೂ ಅಶಕ್ತರು, ವೃದ್ಧರು, ನಿರ್ಗತಿಕರು ಹಾಗೂ ಊಟದ ಅವಶ್ಯಕತೆಯಿರುವವರಿಗೆ ಆಹಾರವನ್ನು ನೀಡುತ್ತೇವೆ. ರೇಷ್ಮೆ ಗೂಡಿನ ಮಾರುಕಟ್ಟೆಗೆ ಬರುವವರು ತಪ್ಪದೇ ಸ್ಯಾನಿಟೈಜರ್ ನಿಂದ ಕೈ ಸ್ವಚ್ಛಗೊಳಿಸಿಕೊಂಡು ಬರಬೇಕು ಮತ್ತು ಮಾಸ್ಕ್ ಧರಿಸಬೇಕು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ, ನ್ಯಾಯಪರ ವೇದಿಕೆಯ ದೀಪು, ವಿನಯ್, ಸುರೇಶ್, ಸುಹೇಲ್ ಸಾಮ್ರಾಟ್ ಹಾಜರಿದ್ದರು.