26.5 C
Sidlaghatta
Wednesday, July 9, 2025

‘ಪರಿಸರ ಸ್ನೇಹಿ ಗಣೇಶ ಮೂರ್ತಿ

- Advertisement -
- Advertisement -

ಮುಖ್ಯಾಂಶಗಳು:
ಪರಿಸರ ಸ್ನೇಹಿ ಗಣೇಶನ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ
ದಾನಿಗಳಿರದ ಕಾರಣ ಮೂರ್ತಿಗಳಿಗೆ ಬೇಡಿಕೆ
ಮಾರಾಟಗಾರರಲ್ಲೂ ಮೂಡಿದ ಪರಿಸರಪ್ರೇಮ
ಪಿ.ಓ.ಪಿ ಗಣಪನ ಮೂರ್ತಿಗಳಿಗೆ ಎರಡನೇ ಸ್ಥಾನ
ದಾನಿಗಳಿರದ ಕಾರಣ ಮೂರ್ತಿಗಳಿಗೆ ಬೇಡಿಕೆ
ಗಣೇಶನ ಮೂರ್ತಿಗಳ ಮಾರಾಟದಲ್ಲೂ ಪರಿಸರ ಜಪ
ಗಣೇಶ ಪ್ರತಿಷ್ಠಾಪನೆಗೆ ಬೆರಳೆಣಿಕೆ ದಿನ ಬಾಕಿಯಿವೆ. ಎಲ್ಲೆಡೆ ‘ಪರಿಸರ’ದ ಜಪ ಶುರುವಾಗಿದೆ. ಮಣ್ಣಿನ, ಪುಟ್ಟ, ವಿಷಬಣ್ಣ ರಹಿತ ಗಣೇಶ ಮೂರ್ತಿಗಳನ್ನೇ ಸ್ಥಾಪಿಸಬೇಕು ಮತ್ತು ಹಬ್ಬವನ್ನು ಸಂಪೂರ್ಣವಾಗಿ ಪರಿಸರ ಸ್ನೇಹಿ ವಿಧಾನದಲ್ಲಿ ಆಚರಿಸಬೇಕು ಎಂಬ ಕೂಗು ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರತಿವರ್ಷವೂ ಪರಿಸರವಾದಿಗಳಿಂದ ಕೇಳಿಬರುತ್ತದೆ. ಆದರೆ ಗಣೇಶ ಮೂರ್ತಿ ಕೊಳ್ಳುವವರು ನಮಗೆ ಮಾರಾಟಕ್ಕೆ ಪರಿಸರ ಗಣಪತಿ ಸಿಕ್ಕರೆ ತಾನೆ ಕೊಳ್ಳುವುದು ಎನ್ನುತ್ತಿದ್ದರು.
ಈ ಬಾರಿ ನಗರದ ವೇಣುಗೋಪಾಲಸ್ವಾಮಿ ಆವರಣದಲ್ಲಿ ಗಣೇಶನ ಮೂರ್ತಿಗಳ ಮಾರಾಟಕ್ಕೆ ಇಟ್ಟ ಸ್ಥಳದಲ್ಲಿ ‘ಪರಿಸರ ಸ್ನೇಹಿ ಗಣೇಶ ಮೂರ್ತಿ ದೊರೆಯುತ್ತದೆ’ ಎಂದು ಫಲಕ ಹಾಕುವ ಮೂಲಕ ಮಾರಾಟಗಾರರೂ ಪರಿಸರ ಸ್ನೇಹಿಗಳಾಗಿ ಪರಿವರ್ತಿತರಾಗಿದ್ದಾರೆ. ಅದರ ಮೂಲಕ ಗ್ರಾಹಕರನ್ನೂ ಪರಿಸರ ಸ್ನೇಹಿಗಳನ್ನಾಗಿಸುತ್ತಿದ್ದಾರೆ.
ನಗರದ ವಾಸವಿ ರಸ್ತೆ, ರಾಮ ದೇವಾಲಯ, ಕೋಟೆ ಈಶ್ವರ ದೇವಾಲಯ, ಯಲ್ಲಮ್ಮ ದೇವಸ್ಥಾನ ಸೇರಿದಂತೆ ಹಲವೆಡೆ ಗಣೇಶನ ಮೂರ್ತಿಗಳ ಮಾರಾಟ ನಡೆಯುತ್ತಿದೆ. ಒಟ್ಟಾರೆ ಮಣ್ಣಿನ ಮೂರ್ತಿಗಳಿಗೆ ಈ ಬಾರಿ ತಾಲ್ಲೂಕಿನಲ್ಲಿ ಬೇಡಿಕೆ ಹೆಚ್ಚಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ರಾಸಾಯನಿಕ ಬಣ್ಣದಿಂದ ಕೆರೆ ಕುಂಟೆ ಕಲುಷಿತಗೊಳ್ಳುವ ಅಪಾಯದ ಬಗ್ಗೆ ಜನರು ಜಾಗೃತರಾಗಿದ್ದಾರೆ.
ನಾನಾ ರೂಪದ, ಆಕಾರದ ಮಣ್ಣಿನ ಗಣಪನ ಮೂರ್ತಿಗಳನ್ನು ತರಿಸಿರುವ ಮಾರಾಟಗಾರರು ಅವುಗಳ ಬೇಡಿಕೆಯನ್ನು ಮನಗಂಡು ಪಿ.ಓ.ಪಿ ಗಣಪನ ಮೂರ್ತಿಗಳಿಗೆ ಎರಡನೇ ಸ್ಥಾನ ನೀಡಿದ್ದಾರೆ. ಆದರೂ ಅವುಗಳ ಮಾರಾಟ ಸಂಪೂರ್ಣವಾಗಿ ನಿಂತಿಲ್ಲ.
‘ಪಿ.ಓ.ಪಿ ಗಣೇಶ ಮೂರ್ತಿಗಳು ನೋಡಲು ಆಕರ್ಷಕ. ಅದರ ಹೊಳಪು, ಬಣ್ಣ ಎಂಥಹವರನ್ನೂ ಸೆಳೆಯುತ್ತದೆ. ಈ ಮೂರ್ತಿಗಳ ಬೆಲೆ ಹೆಚ್ಚು. ಮೊದಲೆಲ್ಲಾ ಈ ರೀತಿಯ ಮೂರ್ತಿಗಳಿಗೆ ಬೇಡಿಕೆಯಿತ್ತು. ಈ ವರ್ಷ ಬಹುತೇಕರು ಮಣ್ಣಿನ ಮೂರ್ತಿಗಳನ್ನೇ ಕೇಳುತ್ತಿದ್ದಾರೆ ಮತ್ತು ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ನಮಗೂ ಈ ಬಗ್ಗೆ ಅರಿವಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾರಾಟದ ಬಗ್ಗೆ ಫಲಕವನ್ನು ಹಾಕಿದ್ದೇವೆ’ ಎನ್ನುತ್ತಾರೆ ಮಾರಾಟಗಾರ ಅನಿಲ್ಕುಮಾರ್.
‘ನಮಗೆ ಪಿಓಪಿ ಗಣಪ ಮೂರ್ತಿಗಳು ಉಳಿದರೆ ಮುಂದಿನ ವರ್ಷಕ್ಕೂ ಎತ್ತಿಟ್ಟುಕೊಳ್ಳಬಹುದು. ಆದರೆ ಮಣ್ಣಿನ ಗಣೇಶ ಮೂರ್ತಿಗಳು ಮುಂದಿನ ವರ್ಷಕ್ಕೆ ಉಳಿಯುವುದಿಲ್ಲ. ನಮಗೆ ನಷ್ಟವಾಗುತ್ತದೆ. ಕಳೆದ ಬಾರಿ ಹಲವರು ಗಣೇಶನ ಮೂರ್ತಿಗಳನ್ನು ದಾನವಾಗಿ ನೀಡಿದ್ದರಿಂದ ನಮಗೆ ಸಾಕಷ್ಟು ನಷ್ಟವಾಗಿತ್ತು. ಈ ಬಾರಿ ತಾಲ್ಲೂಕಿನಲ್ಲಿ ಗಣೇಶನ ಮೂರ್ತಿಗಳನ್ನು ದಾನ ಮಾಡುವ ದಾನಿಗಳಿನ್ನೂ ಹುಟ್ಟಿಕೊಂಡಿಲ್ಲವಾದ್ದರಿಂದ ಮೂರ್ತಿಗಳಿಗೆ ಬೇಡಿಕೆ ಬಂದಿದೆ’ ಎಂದು ಅವರು ತಿಳಿಸಿದರು.
‘ಗಲ್ಲಿ ಗಲ್ಲಿಯ, ಓಣಿ ಓಣಿಯಲ್ಲೂ ಪ್ರತಿಷ್ಠಾಪನೆಗೆ ಸಿದ್ಧತೆ ಬಿರುಸಾಗಿದೆ. ಮನೆ ಮನೆಯಲ್ಲೂ ಗಣೇಶ ಪ್ರತಿಷ್ಠಾಪನೆಗೆ ಸಂಪ್ರದಾಯಬದ್ಧ ಸಿದ್ಧತೆ ನಡೆದಿವೆ. ಸಾಧ್ಯವಿದ್ದಷ್ಟೂ ಮಣ್ಣಿನ, ಚಿಕ್ಕ ಗಣಪನನ್ನೇ ಬಳಸಿ, ಪ್ಲಾಸ್ಟರ್ ಆಫ್ ಪ್ಯಾರಿಸ್ ರೂಪಿತ ಗಣಪ ಬೇಡ. ಬಣ್ಣ ಬೇಕೇ ಬೇಕು ಎಂದಿದ್ದರೆ ನಿಸರ್ಗದತ್ತ ಬಣ್ಣ (ನ್ಯಾಚುರಲ್ ಡೈ) ಹಚ್ಚಿ, ಪ್ಲಾಸ್ಟಿಕ್ ಅಲಂಕಾರ ಬೇಡ, ಪಟಾಕಿ ಸುಟ್ಟು ಕಸ ಮಾಡಬೇಡಿ ಎಂದು ಜನರಿಗೆ ತಿಳಿಹೇಳುವ ಕೆಲಸ ನಗರಸಭೆಯವರಿಂದ ಆಗಬೇಕು. ಕೆಲ ನಗರಸಭೆಗಳ ಆಯುಕ್ತರು ಪಿಓಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶ ನೀಡಿಲ್ಲ. ಅಕಸ್ಮಾತ್ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರಕಟಣೆ ನೀಡಿದ್ದಾರೆ. ನಮ್ಮಲ್ಲೂ ಈ ಬೆಳವಣಿಗೆ ಆಗಬೇಕು. ಇದರಿಂದ ಜಲಮೂಲಗಳು ಕಲುಷಿತಗೊಳ್ಳುವುದು ತಪ್ಪುತ್ತದೆ’ ಎಂದು ರೈತ ಮುಖಂಡ ರವಿಪ್ರಕಾಶ್ ತಿಳಿಸಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!