ಅಂಬೇಡ್ಕರ್, ಮಹಾತ್ಮಾ ಗಾಂಧೀಜಿ, ಕನಕದಾಸರು, ಮೀರಾಬಾಯ್, ಕಿಟಲ್, ಬಸವಣ್ಣ ಮುಂತಾದ ಮಹಾನುಭಾವರ ಮೂರ್ತಿಗಳು ತಾಲ್ಲೂಕಿನ ಚೀಮಂಗಲ ಪಂಚಾಯತಿಯ ನಾರಾಯಣದಾಸರಹಳ್ಳಿಯಲ್ಲಿ ರೂಪುಗೊಳ್ಳುತ್ತಿವೆ. ನಾಡಿನ ನಾನಾ ಕಡೆ ನಡೆಯುವ ಸನ್ಮಾನ ಸಮಾರಂಭಗಳಿಗೆ ಈ ಮಹಾನ್ ವ್ಯಕ್ತಿಗಳ ಮೂರ್ತಿಗಳಿರುವ ನೆನಪಿನ ಕಾಣಿಕೆಗಳು ಬಳಕೆಯಾಗುತ್ತಿವೆ.
ಎನ್.ಪುರುಷೋತ್ತಮ್ ಎಂಬ ನಾರಾಯಣದಾಸರಹಳ್ಳಿಯ ಕಲಾವಿದ ರೂಪಿಸುವ ಈ ಮೂರ್ತಿಗಳು ನಾಡಿನಲ್ಲೆಲ್ಲಾ ತಾಲ್ಲೂಕಿನ ಕಲೆಯ ಪ್ರತಿನಿಧಿಗಳಾಗಿ ಹೆಮ್ಮೆಯ ಕುರುಹುಗಳಾಗಿ ಪಸರಿಸುತ್ತಿವೆ.
ಪ್ರಸಿದ್ಧ ವ್ಯಕ್ತಿಗಳ ಮೂರ್ತಿಗಳನ್ನು ರೂಪಿಸುವ ಕೆಲಸ ಸುಲಭವಲ್ಲ. ಅದಕ್ಕೆ ಕಲೆ, ಶ್ರಮ, ಮಣ್ಣಿನ ಹದ, ಮಿಶ್ರಣ ಮಾಡಬೇಕಾದ ರಸಾಯನಿಕಗಳ ಜ್ಞಾನ ಅತ್ಯವಶ್ಯ. ಇವೆಲ್ಲವನ್ನೂ ಕರಗತ ಮಾಡಿಕೊಂಡಿರುವ ಗ್ರಾಮೀಣ ಪ್ರತಿಭೆಯಿಂದ ಹಲವಾರು ಪ್ರತಿಮೆಗಳು ತಯಾರಾಗುತ್ತಿವೆ.
ಹದವಾದ ಮಣ್ಣನ್ನು ಆರಿಸಿಕೊಂಡು ಚಿತ್ರಿತ ಮೂರ್ತಿಯ ರೂಪವನ್ನು ತಯಾರಿಸಿಕೊಳ್ಳುವ ಇವರು ಸಿಲಿಕಾನ್ ರಬ್ಬರನ್ನು ಬಳಸಿ ಅಚ್ಚನ್ನು ತಯಾರಿಸಿಕೊಳ್ಳುತ್ತಾರೆ. ಕಣ್ಣು, ಮೂಗು, ಮುಖದ ಅಳತೆ, ಆಕಾರ ಎಲ್ಲವನ್ನೂ ಸರಿಯಾದ ಪ್ರಮಾಣದಲ್ಲಿ ತಯಾರಿಸುವುದು ಕಲಾವಿದನ ಕೈಚಳಕವನ್ನು ತೋರಿಸುತ್ತದೆ. ನಂತರ ಫೈಬರ್ ಪದಾರ್ಥದಿಂದ ಅಚ್ಚಿನೊಳಗೆ ಹಾಕಿ ಮೂರ್ತಿಯನ್ನು ತಯಾರಿಸುತ್ತಾರೆ. ಆಮೇಲೆ ಬಣ್ಣ ಹಚ್ಚುತ್ತಾರೆ.
ಬಸವಣ್ಣ, ಅಂಬೇಡ್ಕರ್, ಕನಕದಾಸರು, ಗಾಂಧೀಜಿ ಮೂರ್ತಿಗಳನ್ನು ಅವರವರ ಜಯಂತ್ಯುತ್ಸವಗಳಲ್ಲಿ ನೆನಪಿನ ಕಾಣಿಕೆಯಾಗಿ ನೀಡಲು ಇವರಿಂದ ಮಾಡಿಸಿಕೊಳ್ಳುತ್ತಾರೆ. ಬಿಬಿಎಂಪಿ ಗೆ ಕೆಂಪೇಗೌಡರ ಮೂರ್ತಿಗಳನ್ನು, ಗಾಂಧಿಭವನಕ್ಕೆ ಗಾಂಧೀಜಿ ಮೂರ್ತಿಗಳನ್ನು ಮಾಡಿಕೊಟ್ಟಿದ್ದಾರೆ. ದಸರಾ ಉತ್ಸವಕ್ಕೆ ಮಾಡುವ ಟ್ಯಾಬ್ಲೋ ಕೆಲಸದಲ್ಲೂ ಪಾಲ್ಗೊಂಡಿದ್ದಾರೆ. ಶಿಡ್ಲಘಟ್ಟದಲ್ಲಿನ ಕೆಂಪೇಗೌಡ ಪ್ರತಿಮೆಯ ಕೆಲಸದಲ್ಲೂ ಭಾಗಿಯಾಗಿದ್ದಾರೆ.
‘ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ನನಗೆ ಆಸಕ್ತಿಯಿತ್ತು. ಬಿಡದಿಬಳಿಯ ಜೋಗದದೊಡ್ಡಿಯಲ್ಲಿ ಕೆನರಾಬ್ಯಾಂಕ್ ಕರಕುಶಲಕೇಂದ್ರದಲ್ಲಿ ತರಬೇತಿಯನ್ನು ಪಡೆದೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಶೀಬಿರಗಳಲ್ಲಿ ಪಾಲ್ಗೊಂಡೆ. ಆನಂತರ ಹಲವೆಡೆಯಿಂದ ನನಗೆ ಕೆಲಸ ಮಾಡಲು ಅವಕಾಶಗಳು ದೊರೆಯಿತು. ಈಗೀಗ ನೆನಪಿನ ಕಾಣಿಕೆಗಳ ಮೂರ್ತಿಗಳ ಬೇಡಿಕೆ ಬರುತ್ತಿವೆ. ಸುಮಾರು ಹತ್ತು ವರ್ಷಗಳಿಂದಲೂ ಇದೇ ಕಲೆಯನ್ನೇ ನಂಬಿ ಜೀವನ ನಡೆಸುತ್ತಿದ್ದೇನೆ. ನಗರಗಳಲ್ಲಿರುವವರಿಗೆ ಸಿಗುವಷ್ಟು ಅವಕಾಶಗಳು ಸಿಗದಿದ್ದರೂ ಇಲ್ಲಿಯೇ ಇದ್ದು ಕಲೆಯಿಂದ ಬದುಕಲು ತೀರ್ಮಾನಿಸಿದ್ದೇನೆ’ ಎನ್ನುತ್ತಾರೆ ಎನ್.ಪುರುಷೋತ್ತಮ.
ಕಲೆಯನ್ನು ನಂಬಿರುವ ಈ ಕಲಾವಿದನಿಗೆ ದೆಹಲಿ ಕರ್ನಾಟಕ ಸಂಘ, ಲೇಪಾಕ್ಷಿ ಮತ್ತು ಕೊಪ್ಪಳದ ಜವಾಹರ ನವೋದಯ ವಿದ್ಯಾಲಯ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಪ್ರಶಸ್ತಿಗಳು ಮತ್ತು ಪ್ರಮಾಣಪತ್ರಗಳು ಲಭಿಸಿವೆ.
ಪುರುಷೋತ್ತಮ್ ಮೊಬೈಲ್ ಸಂಖ್ಯೆ : 9611288202
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -