ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್ ಬಳಿಯ ಮುನಿನಾರಾಯಣಪ್ಪ ಅವರ ಮಾವಿನ ತೋಟದಲ್ಲಿರುವ ಬನ್ನಿ ಮರಕ್ಕೆ ತಾಲ್ಲೂಕು ಕಸಾಪ ವತಿಯಿಂದ ಪೂಜೆ ಸಲ್ಲಿಸಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಅವರು ಮಾತನಾಡಿದರು.
ನಮ್ಮ ಸಂಸ್ಕೃತಿಯಲ್ಲಿ ಶಮೀವೃಕ್ಷಕ್ಕೆ ವಿಶೇಷವಾದ ಪ್ರಾಶಸ್ತ್ಯವಿದೆ. ಶಮೀ ಎಂದರೆ ಬನ್ನಿಮರ. ಅದು ಸಕಲ ಪಾಪಗಳನ್ನು ಉಪಶಮನ ಮಾಡುತ್ತದೆ. ಎಲ್ಲ ಬಗೆಯ ಕೆಟ್ಟ ಕೆಲಸಗಳನ್ನು ನಿವಾರಿಸುತ್ತದೆ. ದುಃಖ-ದುಸ್ವಪ್ನಗಳನ್ನು ನೀಗಿಸುತ್ತದೆ ಎಂದು ಅವರು ತಿಳಿಸಿದರು.
ಹಿಂದೆ ಪಾಂಡವರು ಅಜ್ಞಾತವಾಸಕ್ಕಾಗಿ, ಕಾಡಿಗೆ ಹೋದಾಗ ಅರ್ಜುನ ತಮ್ಮೆಲ್ಲರ ಅಸ್ತ್ರಗಳನ್ನು ಬನ್ನಿಮರಕ್ಕೆ ನೇತುಹಾಕಿದನಂತೆ. ಈಗಲೂ ವಿಜಯದಶಮಿಯಂದು ಒಡೆಯರ ವಂಶಜರು ಸಾಂಕೇತಿಕವಾಗಿ ಮೈಸೂರಿನಲ್ಲಿ ಬನ್ನಿಮಂಟಪಕ್ಕೆ ಮೆರವಣಿಗೆ ಸಮೇತ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ. ಹೀಗೆ ಬನ್ನಿ ಅಥವಾ ಶಮೀ ಮರವು ವಿಜಯದ ಸಂಕೇತವಾದ್ದರಿಂದ ಕನ್ನಡದಲ್ಲಿ ವಿಜಯದಶಮಿಯನ್ನು ವಿಜಯ-ದಶಮೀ ಹಾಗೂ ವಿಜಯದ-ಶಮೀ ಎಂದು ಕನ್ನಡಿಗರು ಕೊಂಡಾಡುತ್ತಾರೆ. ಶಮೀ ಮರವು ರಾವಣನವಧೆ, ರಾಮಜಯ ಮತ್ತು ರಾಮರಾಜ್ಯದ ಉದಯಗಳಿಗೆ ಹೇತುವಾಗಿ ಇತಿಹಾಸ ಸಿದ್ಧವಾದ ವಿಜಯಸೇತುವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವರಾಜ್, ಮಂಜುನಾಥ್, ಸುಬ್ರಮಣಿ, ಕೃಷ್ಣಮೂರ್ತಿ, ನರಸಿಂಹಪ್ಪ, ಮುನಿವೆಂಕಟಸ್ವಾಮಿ, ಮನೋಜ್ ಹಾಜರಿದ್ದರು.
- Advertisement -
- Advertisement -
- Advertisement -