ಗ್ರಾಮೀಣ ಭಾಗದ ಯುವಕರನ್ನು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವ ಸಲುವಾಗಿ ಬಯಲುಸೀಮೆ ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಎಂದು ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಯುವಶಕ್ತಿ ರಾಜ್ಯ ಉಪಾಧ್ಯಕ್ಷ ವಿಜಯಭಾವರೆಡ್ಡಿ ತಿಳಿಸಿದರು.
ಬೆಂಗಳೂರಿನಲ್ಲಿ ವಿವಿಧ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಬಯಲುಸೀಮೆ ಭಾಗದ ಯುವಕರ ತಂಡದಿಂದ ರಚನೆ ಮಾಡಿರುವ ಯುವಶಕ್ತಿಯ ಮೂಲಕ ಈಗಾಗಲೇ ಜಿಲ್ಲೆಯಾದ್ಯಂತ ಸುಮಾರು ೨೦ ಸಾವಿರ ಸಸಿಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದೆ. ಈ ಭಾಗದ ಶಾಶ್ವತ ನೀರಾವರಿ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಬಹಳಷ್ಟು ಯುವಕರನ್ನು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದೀಗ ಯುವಜನರಲ್ಲಿ ಕ್ರೀಡಾಮನೋಭಾವ ಬೆಳೆಸುವುದರ ಜೊತೆಗೆ ಹಳ್ಳಿಗಳಲ್ಲಿ ನಮ್ಮ ಸಾಮಾಜಿಕ ಕಾರ್ಯಕ್ರಮಗಳಿಗೆ ಯುವಕರ ಸಹಭಾಗಿತ್ವ ಪಡೆದುಕೊಳ್ಳಲು ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.
ಮುಂದಿನ ಜುಲೈ ೦೬ ಮತ್ತು ೦೭ ರಂದು ಚಿಲಕಲನೇರ್ಪು ಅಕ್ಷರ ಫೌಂಡೇಶನ್ ಹಾಗು ಯುವಶಕ್ತಿ ಸಹಯೋಗದಲ್ಲಿ ಅಕ್ಷರ ಶಾಲೆ (ಸಿ.ಇ.ಟಿ.ಮೈದಾನ) ಮೈದಾನದಲ್ಲಿ ನಡೆಯಲಿರುವ ವಾಲಿಬಾಲ್ ಪಂದ್ಯಾವಳಿಗಳಲ್ಲಿ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಮೊದಲು ನೋಂದಣಿ ಮಾಡಿಕೊಳ್ಳುವ ೪೦ ತಂಡಗಳಿಗೆ ಆಧ್ಯತೆ ನೀಡಲಾಗುತ್ತದೆ. ಈ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವ ಉತ್ತಮ ಆಟಗಾರರನ್ನು ಗುರುತಿಸಿ ಅಮೆರಿಕಾದಲ್ಲಿ ಅನಿವಾಸಿ ಭಾರತೀಯರಿಂದ ಆಯೋಜನೆಗೊಳ್ಳುತ್ತಿರುವ ಅಕ್ಕ ಟೂರ್ನಿಮೆಂಟ್‌ನಲ್ಲಿ ಭಾಗವಹಿಸಲಿಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಹೆಚ್ಚಿನ ಮಾಹಿತಿಗಾಗಿ ಶಿಡ್ಲಘಟ್ಟ ತಾಲ್ಲೂಕಿನ ತಂಡಗಳು, ೯೫೩೮೫೫೪೫೫೫, ೯೪೪೯೫೨೯೧೩೯ ಸಂಖ್ಯೆಗಳಿಗೆ ಸಂಪರ್ಕ ಮಾಡಬಹುದು ಎಂದರು.
ಯುವಶಕ್ತಿಯ ಪದಾಧಿಕಾರಿಗಳಾದ ಮುನಿರೆಡ್ಡಿ, ಮಂಜುನಾಥ್, ಬಿ.ವಿ.ರಾಘವೇಂದ್ರ, ಮಂಜುನಾಥ್ ಹಾಜರಿದ್ದರು.
- Advertisement -
- Advertisement -
- Advertisement -