ಕಳೆದ ವಿಧಾನಪರಿಷತ್ ಚುನಾವಣೆಯ ಮುಂಚೆ ಪತ್ರಿಕಾಗೋಷ್ಠಿ ಕರೆದಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ ಕಾಂಗ್ರೆಸ್ ಪಕ್ಷದಲ್ಲಿ ಒಡಕಿಲ್ಲ, ಎಲ್ಲರೂ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸುತ್ತೇವೆ, ಪಕ್ಷ ವಿರೋಧಿ ಚಟುವಟಿಕೆಗೆ ಶಿಸ್ತು ಕ್ರಮ ಜರುಗಿಸಲು ಮಾಡಿದ್ದ ಶಿಫಾರಸ್ಸನ್ನು ಹಿಂಪಡೆಯಲಾಗಿದೆ ಎಂದು ಹೇಳಿದ್ದರು.
ಆದರೆ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವಿನ ನಂತರ ಫೆಬ್ರುವರಿ ತಿಂಗಳಿನಲ್ಲಿ ನಡೆಯಲಿರುವ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿನ ಕಾಂಗ್ರೆಸ್ ಪಕ್ಷದ ಒಡಕು ಬಹಿರಂಗಗೊಂಡಿದೆ.
ಕಾಂಗ್ರೆಸ್ ಪಕ್ಷದಲ್ಲಿ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಬಣ ಮತ್ತು ಸಂಸದ ಕೆ.ಎಚ್.ಮುನಿಯಪ್ಪ ಬೆಂಬಲಿತರ ಬಣ ಎಂದು ಗುರುತಿಸಿಕೊಳ್ಳುವಂತಾಗಿದೆ. ಕೆಲವರು ಎರಡೂ ಕಡೆ ಕಾಣಿಸಿಕೊಳ್ಳುತ್ತಾ ಇನ್ನೂ ಸಂದಿಗ್ಧತೆಯಲ್ಲಿದ್ದಾರೆ. ಇದರೊಂದಿಗೆ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಹಂಚಿಕೆ ಮಾಡುವವರು ಯಾರು ಎನ್ನುವ ಗೊಂದಲ ಕಾಂಗ್ರೆಸ್ ಕಾರ್ಯಕರ್ತರನ್ನು ಕಾಡಲಾರಂಬಿಸಿದೆ. ಟಿಕೆಟ್ ಆಕಾಂಕ್ಷಿಗಳು ಯಾರ ಬಣದಲ್ಲಿದ್ದರೆ ಕ್ಷೇಮ ಎಂದು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಈಚೆಗೆ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಹಂಡಿಗನಾಳದ ತಮ್ಮ ಸ್ವಗೃಹದಲ್ಲಿ ಬೆಂಗಲಿಗರನ್ನು ಕರೆದು ಸಭೆ ನಡೆಸಿದ್ದು, ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಮೋಸವಾಗಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಟಿಕೆಟ್ ಸಿಗದಂತೆ ಮಾಡಲಾಯಿತು. ಇದರಿಂದ ಪಕ್ಷದ ಚಟುವಟಿಕೆಗಳು ಹಾಗೂ ಬೆಳವಣಿಗೆಗೆ ಹಿನ್ನೆಡೆಯಾಗಿದೆ. ಮುಂಬರುವ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕಿದೆ’ ಎಂದು ಹೇಳಿದ್ದಾರೆ.
ಬುಧವಾರ ಬಸ್ ನಿಲ್ದಾಣದ ಬಳಿಯ ವೆಂಕಟರಾಯಪ್ಪ ಫ್ಯಾಕ್ಟರಿಯಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಬೆಂಬಲಿತರು ಸಭೆ ನಡೆಸಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅವರ ಕೋಟಿಗಟ್ಟಲೆ ಆಸ್ತಿ, ಅವರ ಬೆಂಬಲಿತರ ಅಕ್ರಮ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ್ದಾರೆ.
ಒಟ್ಟಾರೆ ಬೂದಿ ಮುಚ್ಚಿದ ಕೆಂಡದಂತಿದ್ದ ಮುನಿಯಪ್ಪ ದ್ವಯರ ಭಿನ್ನಾಭಿಪ್ರಾಯ ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂಗತಿ ಬಹಿರಂಗವಾಗಿದೆ. ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನು ಪರಿಸ್ಥಿತಿ ಕ್ಷೇತ್ರದಲ್ಲಿ ಮೂಡಿದ್ದು, ಜೆಡಿಎಸ್ ಪಕ್ಷಕ್ಕೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಗಿದೆ. ಕಾಂಗ್ರೆಸ್ ಪಕ್ಷದ ಭಿನ್ನಾಭಿಪ್ರಾಯವು ಮುಂಬರುವ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ.
- Advertisement -
- Advertisement -
- Advertisement -
- Advertisement -