ಬೇಸಿಗೆ ರಜೆ ಬರುತ್ತಿದ್ದಂತೆ ಮಕ್ಕಳನ್ನು ವಿವಿಧ ಶಿಬಿರಗಳಿಗೆ ಸೇರಿಸಲು ಪೋಷಕರು ಆಸಕ್ತಿ ವಹಿಸುತ್ತಾರೆ. ಕ್ರೀಡೆ, ನಾಟಕ, ನೃತ್ಯ, ಚಿತ್ರಕಲೆ, ಹಾಡು ಮುಂತಾದ ತಮ್ಮ ಆಸಕ್ತಿ ಕ್ಷೇತ್ರಗಳಲ್ಲಿ ತರಬೇತಿ ಪಡೆಯಲು ಮಕ್ಕಳೂ ಉತ್ಸುಕರಾಗಿರುತ್ತಾರೆ. ಎಲ್ಲಾ ಮಕ್ಕಳಿಗೂ ಆಸಕ್ತಿಯಿದ್ದರೂ ಈ ಅವಕಾಶವಿರುವುದಿಲ್ಲ.
ವಿಶೇಷವೆಂಬಂತೆ ನಗರದ ದೇಶದಪೇಟೆಯ ಬಾಲಕನೊಬ್ಬ ತಾನು ಕಲಿತ ನೃತ್ಯವನ್ನು ತನ್ನ ಬಡಾವಣೆಯ ಬಡ ಮಕ್ಕಳಿಗೆ ರಜೆಯಲ್ಲಿ ಉಚಿತವಾಗಿ ಹೇಳಿಕೊಡಲು ಪ್ರಾರಂಭಿಸಿದ್ದಾನೆ. ನಗರದ ಬಿಜಿಎಸ್ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವ ಮನೋಜ್ಕುಮಾರ್, ಆಸಕ್ತ ಬಡ ಮಕ್ಕಳಿಗೆ ಜಾನಪದ, ದೇಶಭಕ್ತಿ, ಸಿನೆಮಾ ಮತ್ತು ದೇವರ ಹಾಡುಗಳಿಗೆ ನೃತ್ಯವನ್ನು ತರಬೇತಿ ನೀಡುತ್ತಿದ್ದಾನೆ.
‘ಮನೋಜ್ ಮೂರು ವರ್ಷ ವಯಸ್ಸಿನವನಿದ್ದಾಗಿಂದಲೂ ನೃತ್ಯದಲ್ಲಿ ಆಸಕ್ತಿ ಹೊಂದಿದ್ದ. ಚಿಂತಾಮಣಿಯಲ್ಲಿ ಗುರುಗಳ ಬಳಿ ನೃತ್ಯ ಕಲಿತಿದ್ದಾನೆ. ಪ್ರತಿ ವಾರಾಂತ್ಯದಲ್ಲಿ ಅವನನ್ನು ಕರೆದುಕೊಂಡು ಚಿಂತಾಮಣಿಗೆ ಹೋಗಿ ಬರುತ್ತಿದ್ದೆವು. ಗಣೇಶ ಉತ್ಸವದಲ್ಲಿ, ಶಾಲೆಯಲ್ಲಿ, ವಿವಿದೆಡೆ ನಡೆಸುವ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ಮಾಡಿದ್ದಾನೆ. ಹಲವಾರು ಕಡೆ ಪ್ರಶಸ್ತಿಗಳನ್ನೂ ಪಡೆದಿದ್ದಾನೆ. ಅವನ ನೃತ್ಯವನ್ನು ನೋಡಿ ನಮ್ಮ ಬಡಾವಣೆಯ ಕೆಲವು ಮಕ್ಕಳು ಕಲಿಯಲು ಆಸ್ತಿ ತೋರಿಸಿದಾಗ ಮನೆಯಲ್ಲಿ ಸಂಜೆಯ ವೇಳೆ ಉಚಿತವಾಗಿ ಕಲಿಸುತ್ತಿದ್ದ. ಆ ಮಕ್ಕಳ ತಂಡದ ಪ್ರದರ್ಶನವನ್ನೂ ನೀಡಿದ್ದರು. ಈಗ ಬೇಸಿಗೆಯ ರಜೆಯಲ್ಲಿ ಆಸಕ್ತ ಬಡ ಮಕ್ಕಳಿಗೆ ನೃತ್ಯವನ್ನು ಹೇಳಿಕೊಡಲು ಪ್ರಾರಂಭಿಸಿದ್ದಾನೆ. ವಿದ್ಯೆ ಹಂಚಿದಷ್ಟೂ ಹೆಚ್ಚಾಗುತ್ತದೆ. ಹಾಗಾಗಿ ಅವನ ಕೆಲಸಕ್ಕೆ ನಾವು ಪ್ರೋತ್ಸಾಹ ನೀಡುತ್ತಿದ್ದೇವೆ’ ಎನ್ನುತ್ತಾರೆ ಮನೋಜ್ ತಂದೆ ತಾಯಿಯರಾದ ಶ್ರೀನಿವಾಸ್ ಮತ್ತು ಮಧುಮಾಲತಿ.
ಬೇಸಿಗೆಯ ಶೀಬಿರಗಳು ಎಲ್ಲೆಡೆ ಹಣಕ್ಕಾಗಿ ನಡೆಯುತ್ತವೆ. ಆದರೆ ನಮ್ಮ ದೇಶದಪೇಟೆಯಲ್ಲಿ ಮಕ್ಕಳಿಗೆ ನೃತ್ಯ ತರಬೇತಿಯು ಪುಟ್ಟ ಬಾಲಕನಿಂದಲೇ ಉಚಿತವಾಗಿ ನಡೆಯುತ್ತಿರುವುದು ವಿಶೇಷವಾಗಿದೆ. ಅವರು ನೃತ್ಯದ ಪ್ರದರ್ಶನ ನೋಡಲು ಕಾತುರದಿಂದಿದ್ದೇವೆ ಎನ್ನುತ್ತಾರೆ ದೇಶದಪೇಟೆ ವಾಸಿಗಳು.
ನೃತ್ಯಾಸಕ್ತ ಮಕ್ಕಳು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 9066207335
- Advertisement -
- Advertisement -
- Advertisement -