ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ಬೆಸ್ಕಾಂ ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿದರು.
ನಗರದ ಬೆಸ್ಕಾಂ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿದ್ದ ರೈತರು ಸರ್ಕಾರದ ವಿರುಧ್ದ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಯೊಬ್ಬ ರೈತರು ಲಕ್ಷಾಂತರ ರೂಪಾಯಿಗಳನ್ನು ಸಾಲಮಾಡಿಕೊಂಡು ಕೊಳವೆಬಾವಿಗಳನ್ನು ಕೊರೆಯಿಸಿದ್ದಾರೆ, ಲಕ್ಷಾಂತರ ರೂಪಾಯಿಗಳ ಹಣವನ್ನು ಬೆಳೆಗಳನ್ನು ನಾಟಿ ಮಾಡಲು ಖರ್ಚು ಮಾಡಿದ್ದಾರೆ, ರಾಷ್ಟ್ರೀಕೃತ ಬ್ಯಾಂಕುಗಳು ಸೇರಿದಂತೆ ಹಲವೆಡೆ ಸಾಲಗಳನ್ನು ಮಾಡಿಕೊಂಡಿದ್ದಾರೆ. ಸುಮಾರು ೧೫೦೦ ಅಡಿಗಳಿಂದ ನೀರು ತೆಗೆಯುತ್ತಿದ್ದಾರೆ. ಆದರೆ ಇಂತಹ ವಿಷಮ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಬರಬೇಕಾಗಿರುವ ಸರ್ಕಾರ ಕಣ್ಣು ಮುಚ್ಚಿಕುಳಿತಿದ್ದು, ಕೈಗಾರಿಕೋದ್ಯಮಿಗಳಿಗೆ ವಿದ್ಯುತ್ ಪೂರೈಕೆ ಮಾಡುವ ಸಲುವಾಗಿ ರೈತರನ್ನು ಕತ್ತಲೆಗೆ ದೂಡಿದೆ. ಮನೆಗಳಿಂದ ತೋಟಗಳಿಗೆ ಹೋಗಿ ಮೋಟಾರುಗಳನ್ನು ಚಾಲನೆ ಮಾಡುವಷ್ಟರಲ್ಲಿ ಕರೆಂಟು ಹೋಗುತ್ತದೆ, ರಾತ್ರಿಯಿಡಿ ನಿದ್ದೆಯಿಲ್ಲದೆ ಕಾಯಬೇಕಾಗಿದೆ. ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸುತ್ತಿದ್ದು, ನಮಗೆ ಕನಿಷ್ಟ ೮ ಗಂಟೆಗಳ ಕಾಲ ಮೂರು ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಒಂದು ವೇಳೆ ಸರ್ಕಾರ ನಮಗೆ ಕುಡಿಯಲು ನೀರೂ ಕೊಡದೆ, ವಿದ್ಯುತ್ ಪೂರೈಕೆಯನ್ನೂ ಮಾಡದೆ ನಿರ್ಲಕ್ಷ್ಯ ವಹಿಸಿದರೆ ಬೆಸ್ಕಾಂ ಕಚೇರಿಗೆ ಬೀಗಜಡಿದು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿ ಬೆಸ್ಕಾಂ ಇಲಾಖೆಯ ಎಇಇ ಪರಮೇಶ್ವರಪ್ಪ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ರೈತರಾದ ವೇಣುಗೋಪಾಲ್, ರಾಮಚಂದ್ರಪ್ಪ, ಆಂಜನೇಯರೆಡ್ಡಿ, ಮುನಿನಂಜಪ್ಪ, ತಾದೂರು ಮಂಜುನಾಥ್, ದೇವರಾಜು, ನರಸಿಂಹರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -