ಅಂಗನವಾಡಿಯಿಂದಲೇ ಬೇಧಬಾವವಿಲ್ಲದೆ ಮಕ್ಕಳು ಒಂದಾಗಿ ಬೆರೆತು ನಲಿಯುತ್ತಾ ಕಲಿಕೆಯನ್ನು ನಡೆಸಬೇಕು ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿ ತಾಲ್ಲೂಕು ಅಧ್ಯಕ್ಷ ವಿಜಯ್ ತಿಳಿಸಿದರು.
ನಗರದ ಮೂರನೇ ವಾರ್ಡ್‌ನಲ್ಲಿರುವ ಖಾದ್ರಪ್ಪ ಬೀದಿಯಲ್ಲಿರುವ ಅಂಗನವಾಡಿ ಮಕ್ಕಳಿಗೆ ಮಾನವ ಹಕ್ಕುಗಳ ಜಾಗೃತಿ ಸಮಿತಿ ಮತ್ತು ಕಾರ್ಮಿಕ ಸಮಿತಿ ವತಿಯಿಂದ ಗುರುವಾರ ಉಚಿತವಾಗಿ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂಗನವಾಡಿ ಕೇಂದ್ರದಲ್ಲಿರುವ 25 ಮಕ್ಕಳಿಗೆ ಸಮವಸ್ತ್ರವನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಮಕ್ಕಳಿಗೆ ಅಗತ್ಯವಿರುವ ಪರಿಕರಗಳನ್ನು ನೀಡುತ್ತೇವೆ. ಮನೆಗಳಲ್ಲಿ ಮಕ್ಕಳ ಹುಟ್ಟುಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುವುದರ ಬದಲಿಗೆ ಹತ್ತಿರವಿರುವ ಅಂಗನವಾಡಿ ಕೇಂದ್ರದಲ್ಲಿ ಕೆಲವು ಸವಲತ್ತುಗಳನ್ನು ನೀಡುವುದರೊಂದಿಗೆ ಆಚರಿಸಿದಲ್ಲಿ ಅರ್ಥಪೂರ್ಣವಾಗಿರುತ್ತದೆ. ಸರ್ಕಾರ ನೀಡುವ ಸೌಲಭ್ಯದೊಂದಿಗೆ ಸಮುದಾಯದ ನೆರವೂ ದೊರೆತಲ್ಲಿ ಪುಟ್ಟ ಮಕ್ಕಳಿರುವ ಅಂಗನವಾಡಿಗಳು ಸಶಕ್ತಗೊಳ್ಳುತ್ತವೆ ಎಂದು ಹೇಳಿದರು.
ಖಾದ್ರಪ್ಪ ಬೀದಿಯಲ್ಲಿರುವ ಅಂಗನವಾಡಿ ಕೇಂದ್ರದ ಮುಂದೆ ಅನೈರ್ಮಲ್ಯದಿಂದ ಕೂಡಿದೆ. ಪುಟ್ಟ ಮಕ್ಕಳಿಗೆ ಕಲುಷಿತ ವಾತಾವರನ ಮಾರಕವಾದದ್ದು. ಈ ಬಗ್ಗೆ ನಗರಸಭೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ತಕ್ಷಣ ಅಂಗನವಾಡಿ ಕೇಂದ್ರದ ಬಳಿ ಕಸ ಹಾಗೂ ತ್ಯಾಜ್ಯವನ್ನು ಶುಚಿಗೊಳಿಸಿ ಶುಭ್ರವಾದ ವಾತಾವರಣವನ್ನು ಕಲ್ಪಿಸಿಕೊಡಬೇಕೆಂದು ಈ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಗಿರಿಜಾಂಬಿಕೆ, ಅಂಗನವಾಡಿ ಕಾರ್ಯಕರ್ತೆ ಸೌಭಾಗ್ಯ, ಮಾನವ ಹಕ್ಕುಗಳ ಜಾಗೃತಿ ಸಮಿತಿ ಕಾರ್ಯದರ್ಶಿ ಸುರೇಶ್, ಕಾರ್ಮಿಕ ಸಮಿತಿ ಅಧ್ಯಕ್ಷ ಎನ್.ಪ್ರದೀಪ್, ಮುರಳಿ, ಮೂರ್ತಿ, ನರಸಿಂಹಮೂರ್ತಿ ಹಾಜರಿದ್ದರು.