ಪಠ್ಯೇತರ ಚಟುವಟಿಕೆಗಳು ಮಕ್ಕಳ ವ್ಯಕ್ತಿತ್ವವನ್ನು ರೂಪಿಸಲು ತುಂಬಾ ಸಹಕಾರಿಯಾಗುತ್ತವೆ ಎಂದು ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎನ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಾಲಭವನ ರಾಜ್ಯ ಸೊಸೈಟಿ ಸಹಯೋಗದಲ್ಲಿ ನಗರದ ಹೊರವಲಯದ ಚಿಂತಾಮಣಿ ಮಾರ್ಗದ ಉಲ್ಲೂರುಪೇಟೆ ಸರಕಾರಿ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಬೇಸಿಗೆ ಶಿಬಿರಗಳಲ್ಲಿ ನಡೆಯುವ ಕ್ರಿಯಾತ್ಮಕ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಒಳ್ಳೆಯ ನಾಯಕತ್ವ ಗುಣಗಳ ಬೆಳೆವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತವೆ ಎಂದರು.
ಪಾಠ ಪ್ರವಚನಗಳಿಗಿಂತಲೂ ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಕಾರಣವಾಗುತ್ತದೆ. ಪ್ರತಿಭೆಯ ಅನಾವರಣ ನಮ್ಮ ದೇಶದ ಅಭಿವೃದ್ದಿಗೆ ಪೂರಕವಾಗಲಿದೆ. ಹಾಗಾಗಿ ಇಂತಹ ಶಿಬಿರಗಳು ಹೆಚ್ಚು ಹೆಚ್ಚು ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣ ಭಾಗದಲ್ಲಿ ಶಾಲೆಗೆ ಬೇಸಿಗೆ ರಜೆ ಬಂದರೆ ಮಕ್ಕಳು ಮನೆ, ಕೃಷಿ, ಹೈನುಗಾರಿಕೆಯ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಯಾವುದೆ ರೀತಿಯ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ. ಗ್ರಾಮೀಣ ಭಾಗದ ಪರಿಸ್ಥಿತಿ ಹಾಗೂ ಪೋಷಕರ ಆರ್ಥಿಕ, ಸಾಮಾಜಿಕ ಇನ್ನಿತರೆ ಕಾರಣಗಳೂ ಸಹ ಅದಕ್ಕೆ ಕಾರಣವಾಗಿರಬಹುದು.
ಆದರೆ ನಗರ ಪ್ರದೇಶದಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ಸಾವಿರಾರು ಶುಲ್ಕ ನೀಡಿ ಶಿಬಿರಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಾರೆ. ಹಾಗಾಗಿ ಸರಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ಸಹ ಬೇಸಿಗೆ ಶಿಬಿರಗಳಲ್ಲಿ ತೊಡಗಿಸಿಕೊಳ್ಳಬೇಕು. ಅವರಲ್ಲಿ ಪ್ರತಿಭೆ ಅನಾವರಣಗೊಳ್ಳಬೇಕು. ಇದಕ್ಕಾಗಿ ನುರಿತ ತರಬೇತಿದಾರ ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಲಾಗುವುದು. ಇಂತಹ ಶಿಬಿರಗಳನ್ನು ನಿರ್ಲಕ್ಷಿಸದೆ ತಮ್ಮ ಮಕ್ಕಳನ್ನು ಸೇರಿಸಿ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
10 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಯೋಗ, ಕರಾಟೆ, ಚಿತ್ರಕಲೆ, ಎಂಬ್ರಾಯಿಡರಿ, ಕ್ರಾಫ್ಟ್, ಪೇಪರ್‍ಕಟಿಂಗ್ ಮಾಡುವುದು. ಹಾಡು ಹಾಡುವುದು, ಹಾಗೆಯೆ ಕಥೆ, ಕವನ, ಲೇಖನಗಳ ಬರವಣಿಗೆ ಇತ್ಯಾದಿ ವಿಷಯಗಳ ಕುರಿತು ಪ್ರಾಯೋಗಿಕವಾಗಿ ಸಂಬಂದಿಸಿದ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ತಿಳಿಸಿಕೊಡಲಾಗುವುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕಿ ಗಿರಿಜಾಂಭಿಕ, ಸಂಗೀತ ಶಿಕ್ಷಕರಾದ ಎಸ್.ವಿ. ರಾಮಮೂರ್ತಿ, ಲಕ್ಷ್ಮೀನಾರಾಯಣ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -