ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಬ್ಯಾಗ್ ರಹಿತ ದಿನಾಚರಣೆ ಮತ್ತು ಫ್ಲೋರೋಸಿಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮಿದೇವಮ್ಮ ಮಾತನಾಡಿದರು.
ಅಂತರ್ಜಲಮಟ್ಟ ಕುಸಿಯುತ್ತಿದ್ದು ಕೊಳವೆ ಬಾವಿಗಳಲ್ಲಿ ಫ್ಲೋರೈಡ್‌ಯುಕ್ತ ನೀರಿನ ಲಭ್ಯತೆ ಹೆಚ್ಚಿದಂತೆಲ್ಲಾ ಆರೋಗ್ಯ ಸಮಸ್ಯೆಗಳೂ ಹೆಚ್ಚುತ್ತಿವೆ ಎಂದು ಅವರು ತಿಳಿಸಿದರು.
ಬಯಲುಸೀಮೆಯ ಸುಮಾರು ೨೪ ಜಿಲ್ಲೆಗಳಲ್ಲಿ ಫ್ಲೋರೈಡ್‌ಯುಕ್ತ ನೀರು ಸಿಗುತ್ತಿದೆ. ಕುಡಿಯವ ನೀರಿನ ಅಶುದ್ಧತೆಯಿಂದಾಗಿ ದಂತಕ್ಷಯ, ಮೂಳೆರೋಗಗಳಿಂದ ಹಲವಾರು ಮಂದಿ ಬಳಲುತ್ತಿದ್ದಾರೆ. ಅದಕ್ಕಾಗಿ ಎಳೆವಯಸ್ಸಿನಿಂದಲೇ ಸಿ ವಿಟಮಿನ್‌ಯುಕ್ತ ಆಹಾರ ಪದಾರ್ಥಗಳನ್ನು ಹೆಚ್ಚು ಬಳಸಬೇಕು ಎಂದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಹಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಫ್ಲೋರೈಡ್ ಅಂಶ ಮಿತಿಮೀರಿರುವ ಕುಡಿಯುವ ನೀರು ಲಭ್ಯವಾಗುವ ಪ್ರದೇಶಗಳಲ್ಲಿ ಬೆಳೆಯಲಾಗುವ ಹಣ್ಣು, ತರಕಾರಿಗಳಲ್ಲಿಯೂ ಜೈವಿಕಸಾಂದ್ರತೆಯ ಆಧಾರದಲ್ಲಿ ಪರಿಣಾಮಗಳಾಗುತ್ತವೆ. ಅದಕ್ಕಾಗಿ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿ, ಅಗತ್ಯವಿರುವೆಡೆಯಲ್ಲೆಲ್ಲಾ ನೆಲ್ಲಿಕಾಯಿ, ನಿಂಬೆ ಜಾತಿಯ ಗಿಡಗಳು, ನುಗ್ಗೆ ಸಸ್ಯಗಳನ್ನು ಹೆಚ್ಚೆಚ್ಚು ಬೆಳಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಮಕ್ಕಳಿಗೆ ಬ್ಯಾಗ್ ರಹಿತ ದಿನಾಚರಣೆ ಅಂಗವಾಗಿ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ಆವರಣದಲ್ಲಿ ನಿಂಬೆ, ನೆಲ್ಲಿ, ನುಗ್ಗೆಜಾತಿಯ ಸಸಿಗಳನ್ನು ನೆಡಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ತಾಲ್ಲೂಕು ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರಾಧಾ, ಅಂಗನವಾಡಿ ಕಾರ್ಯಕರ್ತೆ ಮಂಜುಳಮ್ಮ, ಶಿಕ್ಷಕ ಬಿ.ನಾಗರಾಜು, ಎಂ.ವೈ.ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್, ಅನಿತಾ ಪಾಲ್ಗೊಂಡಿದ್ದರು.
- Advertisement -
- Advertisement -
- Advertisement -