ಮಕ್ಕಳ ಹಕ್ಕುಗಳು, ಅವರ ಶಿಕ್ಷಣ, ಸಮಾನ ಅವಕಾಶ ಇತ್ಯಾದಿ ಕುರಿತು ಸಾಕಷ್ಟು ಚರ್ಚೆಗಳು ಆಗುತ್ತಿದ್ದರೂ, ಅಂಥ ಚರ್ಚೆಗಳ ಪರಿಧಿಯಿಂದ ಆಚೆಯೇ ಕೆಲ ಮಕ್ಕಳು ಉಳಿದುಬಿಟ್ಟಿದ್ದು ಅವರನ್ನು ಗುರುತಿಸಿ ಶಿಕ್ಷಣ ನೀಡಬೇಕಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಪಟ್ಟಣದ ಉಲ್ಲೂರುಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆಯ ಅಂಗವಾಗಿ ನಡೆದ ಬಾಲ ಸ್ವಚ್ಛತಾ ಮಿಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಚ್ಛ ಭಾರತ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಿರುವ ರಾಜ್ಯ ಸರಕಾರ ‘ಬಾಲ ಸ್ವಚ್ಛತಾ ದಿವಸ’ ಆಚರಣೆಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ದಿನಾಚರಣೆಯಂದು ಪ್ರಾರಂಭಿಸಿ ಆರು ದಿನಗಳ ಕಾಲ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಬಾಲ ಸ್ವಚ್ಛತಾ ದಿನವನ್ನು ಆಚರಿಸಲಾಗುತ್ತಿದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ. ಸ್ವಚ್ಛತೆಯ ಕೊರತೆಯಿಂದಾಗಿ ಮಕ್ಕಳು ನಾನಾ ರೋಗಗಳಿಗೆ ತುತ್ತಾಗುವುದು ಸಾಮಾನ್ಯ ಸಂಗತಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ಮಾತನಾಡಿ, ಮಕ್ಕಳ ಮನಸ್ಸು ಸೂಕ್ಷ್ಮ. ಆದರೆ ಗ್ರಹಣಾ ಶಕ್ತಿ ಅಧಿಕ. ಪೋಷಕರು ಮತ್ತು ಶಿಕ್ಷಕರು ಅದನ್ನು ಅರಿತು ಅವರಿಗೆ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕು. ಆರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಮತ್ತು ಶಾಲೆ ಸ್ವಚ್ಛತೆ, ಶಾಲಾ ಪರಿಸರ ಹಾಗೂ ಕ್ರೀಡಾಂಗಣದ ಸ್ವಚ್ಛತೆಗೆ ಒತ್ತು ನೀಡಲಾಗುತ್ತದೆ. ನಂತರ ಮಕ್ಕಳಲ್ಲಿ ವೈಯಕ್ತಿಕ ಸ್ವಚ್ಛತೆ, ಆಹಾರದ ಸ್ವಚ್ಛತೆ ಮತ್ತು ಶುದ್ಧ ಕುಡಿಯುವ ನೀರಿನ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲಾಗುತ್ತದೆ. ಅಂತಿಮವಾಗಿ ಮಕ್ಕಳಿಗೆ ಶೌಚಾಲಯದ ಬಳಕೆ ಹಾಗೂ ಸ್ವಚ್ಛತೆ ಮತ್ತು ಅದರ ಪ್ರಾಮುಖ್ಯದ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ವೇಷಭೂಷಣಗಳನ್ನು ಧರಿಸಿದ್ದ ಮಕ್ಕಳು ಕೋಲಾಟ ಹಾಗೂ ನೃತ್ಯವನ್ನು ಪ್ರದರ್ಶಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಲಕ್ಷ್ಮೀದೇವಮ್ಮ, ಪ್ರಭಾರಿ ಇ.ಒ ಗಣಪತಿ ಸಾಕರೆ, ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್, ಆಯುಷ್ ವೈದ್ಯ ಡಾ.ವಿಜಯ್ಕುಮಾರ್, ಮಹಿಳಾ ಸಾಂತ್ವನ ಕೇಂದ್ರದ ಡಾ.ವಿಜಯಾ, ಸೌಮ್ಯ, ಅಂಗನವಾಡಿ ಮೇಲ್ವಿಚಾರಕರಾದ ಗಿರಿಜಾಂಬಿಕೆ, ಶಾಂತಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -