ಮಕ್ಕಳ ಹಕ್ಕುಗಳ ರಕ್ಷಣೆ ಕೇವಲ ಯಾವುದೋ ಒಂದು ಇಲಾಖೆಗೆ ಸಂಬಂದಿಸಿದ್ದಲ್ಲ. ಎಲ್ಲ ಇಲಾಖೆಯ ಅಧಿಕಾರಿಗಳೂ ಸಹ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದರ ಜತೆಗೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಮಂಗಳವಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಸಮಿತಿಯ ಆಶ್ರಯದಲ್ಲಿ ನಡೆದ ತಾಲ್ಲೂಕಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಾಮರ್ಥ್ಯ ಅಭಿವೃದ್ಧಿ ಹಾಗೂ ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಸಂಪತ್ತಾಗಬಹುದಾದ ಮಕ್ಕಳ ಬಾಳನ್ನು ಒಸಕಿ ಹಾಕುವ ಬಾಲ್ಯ ವಿವಾಹ ಇತ್ತೀಚಿನ ದಿನಗಳಲ್ಲಿ ಒಂದು ದೊಡ್ಡ ಪಿಡುಗಾಗಿ ಸಮಾಜವನ್ನು ಕಾಡುತ್ತಿದೆ. ಆಟ ಆಡುವ ವಯಸ್ಸಿನಲ್ಲಿ, ಈ ಸಮಾಜ, ಈ ಜೀವನ, ಸಂಸಾರದ ಬದುಕು ಏನೆಂಬುದೆ ಸರಿಯಾಗಿ ತಿಳಿಯದ, ಅರ್ಥವಾಗದ ಚಿಕ್ಕವಯಸಿನಲ್ಲಿಯೆ ಮದುವೆಯಾದರೆ ಅವರು ಆ ಜೀವನಕ್ಕೆ ದೈಹಿಕವಾಗಿ, ಮಾನಸಿಕವಾಗಿ ಹೊಂದಿಕೊಳ್ಳದೆ ಖಿನ್ನತೆಗೆ ಒಳಗಾಗುವ ಸಂಭವಗಳೆ ಹೆಚ್ಚು.ಹಾಗಾಗಿ ಬಾಲ್ಯವಿವಾಹದಂತ ಸಾಮಾಜಿಕ ಪಿಡುಗನ್ನು ತೊಲಗಿಸಲು ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಮುದಾಯ ಬದ್ದತೆಯಿಂದ ನಡೆದುಕೊಳ್ಳಬೇಕಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವಂತೆ ಒತ್ತಡ ಹಾಕುವ ಮೂಲಕ ಅವರ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ದೂರಿದರು.
ಶಾಲೆಯಲ್ಲಿ ಪಾಠ ಪ್ರವಚನಗಳನ್ನು ಮುಗಿಸಿ ಮನೆಗೆ ಬಂದ ತಕ್ಷಣ ಮತ್ತೆ ಟ್ಯೂಷನ್, ಹೋಂ ವರ್ಕ್ ಎಂದು ಮಗುವಿನ ಮೇಲೆ ಇನ್ನಿಲ್ಲದ ಒತ್ತಡ ಹಾಕಲಾಗುತ್ತದೆ. ಇದರಿಂದ ಮಗುವಿನ ಆಟ ಆಡುವ, ಅವರ ಇಷ್ಟಕ್ಕೆ ತಕ್ಕಂತೆ ನಡೆದುಕೊಳ್ಳುವುದಕ್ಕೆ ಅವಕಾಶವೇ ಇಲ್ಲದಂತಾಗುತ್ತದೆ ಎಂದರು.
ಮಕ್ಕಳ ಸ್ಥಿತಿಗತಿ ಕುರಿತು ಎಂ.ಜಿ.ಗೋಪಾಲ್, ಮಕ್ಕಳ ಹಕ್ಕುಗಳ ವಿಷಯ ಕುರಿತು ಸತೀಶ್, ಬಾಲ ನ್ಯಾಯ ಕಾಯಿದೆ ಕುರಿತು ಡಿ.ಕೆ.ರಾಮೇಗೌಡ, ಕಡ್ಡಾಯ ಶಿಕ್ಷಣ ಕುರಿತು ಕುರಿತು ವೆಂಕಟೇಶ್ರವರು ಉಪನ್ಯಾಸ ನೀಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಆಂಜಿನಮ್ಮ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿಯಿತಿ ಕಾರ್ಯನಿರ್ವಾಹಣಾಧಿಕಾರಿ ಡಿ.ಎಸ್.ಗುರುಬಸಪ್ಪ, ಶಿಶು ಅಭಿವೃದ್ಧಿ ಅಧಿಕಾರಿ ಲಕ್ಷ್ಮೀದೇವಮ್ಮ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ಕುಮಾರ್, ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ, ಆರೋಗ್ಯ ಶಿಕ್ಷಣಾಧಿಕಾರಿ ಕಿರಣ್ಕುಮಾರ್, ವಿಂಧ್ಯ, ಬಿಸಿಎಂ ಇಲಾಖೆಯ ಶಂಕರ್, ಮಹಿಳಾ ಸಾಂತ್ವನ ಕೇಂದ್ರದ ಡಾ.ವಿಜಯ, ಸೌಮ್ಯ ಮುಂತಾದವರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -