ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ ಚುನಾವಣಾ ಆಯೋಗ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ- 2020 ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿದರು.
ಸೆಪ್ಟಂಬರ್ ಒಂದರಿಂದ ಅಕ್ಟೋಬರ್ 30ನೇ ತಾರೀಖಿನವರಿಗೆ ಭಾರತ ಚುನಾವಣಾ ಆಯೋಗ ಸಮಗ್ರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2020 ಕಾರ‍್ಯಕ್ರಮವನ್ನು ಜಾರಿಗೊಳಿಸಿದೆ. ಅದರಂತೆ ಈ ದಿನಗಳಲ್ಲಿ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಕುಟುಂಬದ ಎಲ್ಲ ಸದಸ್ಯರನ್ನು ಒಳಗೊಂಡ ಮತದಾರರ ಮಾಹಿತಿ ಒಂದೇ ಭಾಗದಲ್ಲಿ ಮತ್ತು ಸ್ಥಳದಲ್ಲಿ ಇರುವಂತೆ ನಿಗಾ ವಹಿಸಲಾಗುತ್ತದೆ. ಮನೆ ಸಂಖ್ಯೆ ನಮೂನೆ -7 ಮೂಲಕ ಒಂದಕ್ಕಿಂತ ಹೆಚ್ಚಿನ ನೋಂದಣಿ ಇದ್ದರೆ ತೆಗೆದುಹಾಕುವುದು, ಮರಣವಾಗಿದ್ದರೆ ಅಥವಾ ಕಾಯಂ ಆಗಿ ಸ್ಥಳಾಂತರಗೊಂಡಿದ್ದರೆ ಹೆಸರು ತೆಗೆದುಹಾಕುವುದು. ಅರ್ಹರೆಲ್ಲರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗುವಂತೆ ನೋಡಿಕೊಳ್ಳುವುದು ಇದರ ಗುರಿ ಎಂದರು.
ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಫೋಟೋ ಅದಲು-ಬದಲು, ತೆಗೆದು ಹಾಕುವಿಕೆ, ವಿಳಾಸ ಬದಲಾವಣೆ ಸೇರಿದಂತೆ ಮತದಾರರ ಚೀಟಿಯಲ್ಲಿನ ಲೋಪದೋಷಗಳನ್ನು ವಿಶೇಷ ಪರಿಷ್ಕರಣೆ ಮೊಬೈಲ್ ಆಪ್ ಮುಖಾಂತರ ಮಾಡುವುದನ್ನು ಈ ಸಂದರ್ಭದಲ್ಲಿ ಉಪನ್ಯಾಸಕ ಡಾ.ರಘು ಕಾಲೇಜಿನ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಚಂದ್ರನಾಯ್ಕ್, ಮುನಿರಾಜು, ಸುಂದರಾಚಾರಿ ಹಾಜರಿದ್ದರು.