ನಗರದ ಸ್ತ್ರೀಶಕ್ತಿ ಭವನದಲ್ಲಿ ಗುರುವಾರ ಕಸಬಾ ಹೋಬಳಿಯ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಗ್ರೇಡ್ 2 ತಹಶೀಲ್ದಾರ್ ಲಕ್ಷ್ಮೀಕಾಂತಮ್ಮ ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆಗಳನ್ನು ನೈಜ ಫಲಾನುಭವಿಗಳಿಗೆ ದೊರಕಿಸಿ ಕೊಡಲು ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ, ಅಂಗವಿಕಲರ ವೇತನಗಳನ್ನು ಪಡೆಯಲು ಅರ್ಹ ಫಲಾನುಭವಿಗಳು ಮಧ್ಯವರ್ತಿಗಳ ಮೊರೆ ಹೋಗಬಾರದು. ಪಿಂಚಣಿ ಅದಾಲತ್‌ನಲ್ಲಿ ದಾಖಲೆಗಳನ್ನು ಪರಿಶೀಲಿಸಿ ನೆರವಾಗಲು ಅಧಿಕಾರ ವರ್ಗವಿರುತ್ತದೆ. ಈಗ ಆಧಾರ್ ಕಾರ್ಡ್ ಕಡ್ಡಾಯವಿರುವುದರಿಂದ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳಿ ಎಂದು ಹೇಳಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ ಮಾತನಾಡಿ, ಪಿಂಚಣಿಗೆ ಸಂಬಂಧಿಸಿದಂತೆ ಯಾವುದೇ ತೊಂದರೆಯಿದ್ದರೂ ಮಧ್ಯಾಹ್ನ ಮೂರು ಗಂಟೆಯ ನಂತರ ಸಂಪರ್ಕಿಸಿ. ಅಂಗವಿಕಲರು ಮತ್ತು ವೃದ್ಧರು ಸಂಬಂಧಿಕರನ್ನು ಕಳುಹಿಸಿಕೊಡಿ. ನಿಮಗೆ ಸೇವೆ ನೀಡಲು ಅಧಿಕಾರಿಗಳು ಸಿದ್ಧವಿರುತ್ತಾರೆ. ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಹತೆಯುಳ್ಳವರು ಈ ಯೋಜನೆಯ ಲಾಭ ಪಡೆಯಿರಿ. ನಿಮಗೆ ತಿಳಿದಿದ್ದವರಿಗೂ ಈ ಯೋಜನೆಯ ಬಗ್ಗೆ ತಿಳಿಸಿ ಕಚೇರಿಗೆ ಕಳುಹಿಸಿಕೊಡಬೇಕೆಂದು ಹೇಳಿದರು.
ಶಿರಸ್ತೆದಾರ ಮಂಜುನಾಥ, ಗ್ರಾಮ ಲೆಕ್ಕಿಗರಾದ ನಾಗೇಂದ್ರ, ನಾಗರಾಜ್ ಹಾಜರಿದ್ದರು.
- Advertisement -
- Advertisement -
- Advertisement -