ನಗರದ ಸ್ತ್ರೀಶಕ್ತಿ ಭವನದಲ್ಲಿ ಗುರುವಾರ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬಾಲಭವನ ಸೊಸೈಟಿ ವತಿಯಿಂದ ಆಯೋಜಿಸಿದ್ದ 5 ರಿಂದ 16 ವರ್ಷದೊಳಗಿನ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಸಿಡಿಪಿಒ ಅಧಿಕಾರಿ ಲಕ್ಷ್ಮೀದೇವಮ್ಮ ಮಾತನಾಡಿದರು.
ವರ್ಷವಿಡೀ ಪಠ್ಯ, ಪುಸ್ತಕ, ಹಾಜರಾತಿ, ತರಗತಿ, ಓದು, ಮನೆಪಾಠ, ಪರೀಕ್ಷೆ, ಫಲಿತಾಂಶ… ಈ ಸರಣಿ ಪ್ರಕ್ರಿಯೆಯಲ್ಲಿ ನಲುಗಿದ ವಿದ್ಯಾರ್ಥಿಗಳಿಗೆ ಮನರಂಜನೆಯ ಜತೆ ಜೀವನಾವಶ್ಯಕ ಕೌಶಲಗಳನ್ನು, ಸೃಜನಶೀಲತೆಯನ್ನು ರೂಢಿಸುವ ನಿಟ್ಟಿನಲ್ಲಿ ‘ಬೇಸಿಗೆ ಶಿಬಿರ’ಗಳಿಗೆ ಸೇರಿಸುವುದು ಉತ್ತಮ ವಿಚಾರ ಎಂದು ಅವರು ತಿಳಿಸಿದರು.
ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ಪೋಷಕರ ಅವಲಂಬನೆ, ನಿರ್ಬಂಧಗಳಿಲ್ಲದೆ ಸ್ವಾವಲಂಬನೆ, ಸ್ವಾತಂತ್ರ್ಯದ ಬದುಕನ್ನು ಅನುಭವಿಸುತ್ತಾರೆ. ಸ್ವಯಂ, ಸ್ವಗೌರವ, ಘನತೆಯ ಪರಿಕಲ್ಪನೆಯನ್ನು ಅರಿತುಕೊಳ್ಳುತ್ತಾರೆ. ಸೃಜನಶೀಲ ಚಟುವಟಿಕೆಗಳಿಗೆ ವೇದಿಕೆ ಸಿಗುತ್ತದೆ. ಇದರಿಂದ ಅಭಿವ್ಯಕ್ತಿ ಸಾಮರ್ಥ್ಯ ವೃದ್ಧಿಸುತ್ತದೆ. ವಿವಿಧ ಚಟುವಟಿಕೆಗಳು ದೇಹದ ಉತ್ಸಾಹ, ಆರೋಗ್ಯವನ್ನು ಇಮ್ಮಡಿಸುತ್ತವೆ. ಬೇಸಿಗೆಯ ಧಗೆಯನ್ನು ಮರೆಸಿ, ಮಾನಸಿಕ ಉಲ್ಲಾಸ ನೀಡುತ್ತವೆ.ಹಲವು ಕೌಶಲಗಳ ಕಲಿಕೆಯಿಂದ ಸಾಹಸ ಪ್ರವೃತ್ತಿ ಹಾಗೂ ಮಾನಸಿಕ ಸಂತೃಪ್ತಿ ಹೆಚ್ಚುತ್ತದೆ. ಇದು ಆಸಕ್ತಿ– ಅಭಿರುಚಿಗಳ ವಿಕಾಸಕ್ಕೂ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.
ಹತ್ತು ದಿನಗಳ ಕಾಲ ನಡೆಯುವ ಈ ಬೇಸಿಗೆ ಶಿಬಿರದಲ್ಲಿ ಚಿತ್ರಕಲೆ, ಕರಕುಶಲಕಲೆ, ಜೇಡಿಮಣ್ಣಿನ ಕಲೆ, ಸಮೂಹನೃತ್ಯ, ಸಮೂಹ ಗೀತೆ, ಕರಾಟೆ, ಯೋಗ, ಕಸದಿಂದ ರಸ ಮುಂತಾದವುಗಳನ್ನು ಮಕ್ಕಳಿಗೆ ಕಲಿಸಲಾಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು ಮಾತನಾಡಿ, ಶಿಬಿರಗಳಲ್ಲಿ ಆಯೋಜಿಸುವ ಬಹುತೇಕ ಚಟುವಟಿಕೆಗಳಲ್ಲಿ ಶಿಬಿರಾರ್ಥಿಗಳಿಗೆ ಯಶಸ್ಸಿನ ಅನುಭವ ದೊರಕುತ್ತದೆ. ಇದರಿಂದ ಅವರಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತದೆ. ಗುಂಪಿನಲ್ಲಿ ಕೆಲಸ ಮಾಡುವುದು, ಆಟವಾಡುವುದರಿಂದ ಮಕ್ಕಳಲ್ಲಿ ಸಹಕಾರ, ಸಹಬಾಳ್ವೆ, ಸಹಯೋಗ, ಸಂಯೋಜನೆ, ಸಂಘಟನೆ, ಸಾಮುದಾಯಿಕ ಬದ್ಧತೆ, ಭಾವೈಕ್ಯ, ಸಾಮರಸ್ಯ, ನಾಯಕತ್ವ… ಇತ್ಯಾದಿ ಸಾಮಾಜಿಕ ಕೌಶಲಗಳು ವೃದ್ಧಿಸುತ್ತವೆ ಎಂದು ಹೇಳಿದರು.
ಸಿಡಿಪಿಒ ಅಧಿಕಾರಿಗಳಾದ ಸಂದೀಪ್, ಶಾಂತಾ ಜಿಂದಾಳೆ, ಗಿರಿಜಾಂಬಿಕೆ, ಅಂಬುಜಾ, ಕರಾಟೆ ಶಿಕ್ಷಕ ಅರುಣ್‌ಕುಮಾರ್, ನೃತ್ಯ ಶಿಕ್ಷಕಿ ನವ್ಯ, ಚಿತ್ರಕಲೆ ಶಿಕ್ಷಕಿ ನಳಿನ, ಸಂಗೀತ ಶಿಕ್ಷಕ ಲಕ್ಷ್ಮೀನಾರಾಯಣ, ರಾಮಮೂರ್ತಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -