ಭಾನುವಾರ ಅಗತ್ಯ ಸೇವೆಗಳನ್ನು ಹೊರತುಪಡಿಸಿ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ತಮ್ಮ ಬೆಂಬಲಿಗರೊಡನೆ ನಗರದ ಬಸ್ ನಿಲ್ದಾಣದ ಬಳಿಯಿರುವ ವೆಂಕಟರಾಯಪ್ಪ ಅವರ ಕಾರ್ಖಾನೆಯಲ್ಲಿ ಮುಸ್ಲಿಂ ಸಮುದಾಯದ ಬಡವರಿಗೆ ರಂಜಾನ್ ಹಬ್ಬದ ಅಂಗವಾಗಿ ಆಹಾರದ ಕಿಟ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು ಮಾತನಾಡಿ, “ಕೇಂದ್ರದ ಬಿಜೆಪಿ ಸರ್ಕಾರ, ದೇಶವನ್ನು ತೀರಾ ಕೆಳಮಟ್ಟಕ್ಕೆ ತಂದಿದೆ. ದೊಡ್ಡ ಸಾಹುಕಾರರಿಗೆ 15 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಬಡವರಿಗೆ 15 ಲಕ್ಷ ಕೊಡ್ತೀವಿ ಎಂದು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ದೇಶ ಉಳಿಸಬೇಕು, ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕಾಗಿದೆ. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಡಿಯಲ್ಲಿ ಕೆಲಸ ಮಾಡುವಂತಾಗಬೇಕು. ಜನಪರವಾದ ಕೆಲಸಗಳು ಮಾಡುವುದರ ಬದಲಿಗೆ ಧರ್ಮಗಳ ಹೆಸರಿನಲ್ಲಿ ರಾಜಕೀಯ ಮಾಡಲಿಕ್ಕೆ ಹೊರಟಿದೆ ಕೇಂದ್ರ ಸರ್ಕಾರ” ಎಂದು ಕೇಂದ್ರ ಸರ್ಕಾರವನ್ನು ದೂರಿದರು.
“ರೇಷ್ಮೆನೂಲಿನ ಬೆಲೆ 4500 ರಿಂದ 2000 ಕ್ಕೆ ಬಂದಿದೆ. ಗೂಡು 500 ರಿಂದ 200 ಕ್ಕೆ ಇಳಿಕೆಯಾಗಿದೆ. ಇದನ್ನು ಸರಿದೂಗಿಸಲಿಕ್ಕೆ ಸಾಧ್ಯವಾಗುತ್ತಿಲ್ಲ. ಹಣ್ಣು ತರಕಾರಿಗಳ ಖರೀದಿಗಾಗಿ ಹಾಪ್ ಕಾಮ್ಸ್ ಗಳಿಗೆ ಶಕ್ತಿ ತುಂಬಿಸಬೇಕು” ಎಂದು ಒತ್ತಾಯಿಸಿದರು.
ಕೋಲಾರ ನಗರಸಭೆ ಸದಸ್ಯ ಮುಬಾರಕ್ ಮಾತನಾಡಿ, ದೇಶದಲ್ಲಿದ್ದ ಬಿಜೆಪಿ ಅಲೆಯಿಂದ ಕೆ.ಎಚ್.ಮುನಿಯಪ್ಪ ಅವರು ಸೋತಿದ್ದಾರೆಯೇ ಹೊರತು, ಯಾರೂ ಸೋಲಿಸಿಲ್ಲ. ಕೊರೊನಾ ರೋಗ ಜಾತಿ, ಮತ, ಧರ್ಮಗಳನ್ನು ನೋಡಿಕೊಂಡು ಬರುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಆರ್ಥಿಕ ವ್ಯವಸ್ಥೆ ತೀರಾ ಹದಗೆಟ್ಟಿದ್ದು, ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್, ಕಂಬದಹಳ್ಳಿ ಜಗದೀಶ್, ಸನಾವುಲ್ಲಾ, ಬಿ.ವಿ.ಮುನೇಗೌಡ, ರಮೇಶ್, ರಾಮಯ್ಯ, ವೇಣು, ಅಶ್ವಥನಾರಾಯಣರೆಡ್ಡಿ, ನಗರಸಭಾ ಸದಸ್ಯರಾದ ನರಸಿಂಹಮೂರ್ತಿ, ಕೃಷ್ಣಮೂರ್ತಿ, ಬಂಗಾರಪ್ಪ, ಕಂಬದಹಳ್ಳಿ ಜಗದೀಶ್, ಕೆ.ಎನ್.ಮುನೀಂದ್ರ, ಚಂದ್ರು, ಮಂಜುನಾಥ್, ಮುನಿಯಪ್ಪ, ಕಮಲಮ್ಮ, ಅಪ್ಸರ್ ಪಾಷ, ತಾಜ್ ಪಾಷ ಹಾಜರಿದ್ದರು.