ಮುಂದಿನ ದಿನಗಳಲ್ಲಿ ಕೋವಿಡ್ 19 ಮಹಾಮಾರಿಯ ವಿರುದ್ದ ಹೋರಾಡಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ತನ್ವೀರ್ ಅಹಮ್ಮದ್ ತಿಳಿಸಿದರು.
ತಾಲ್ಲೂಕಿನ ಈ ತಿಮ್ಮಸಂದ್ರ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕೋವಿಡ್ 19 ವಾರದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ಎರಡು ತಿಂಗಳುಗಳಿಂದ ಕೋವಿಡ್ 19 ಮಹಾಮಾರಿಯ ವಿರುದ್ದ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮನೋಸ್ಥೈರ್ಯ ತುಂಬುವುದು ಸೇರಿದಂತೆ ಮುಂದಿನ ದಿನಗಳಲ್ಲಿ ಕೊರೋನಾ ವಿರುದ್ದ ಹೋರಾಡಲು ಮತ್ತಷ್ಟು ಪ್ರೋತ್ಸಾಹ ನೀಡುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಜಲಗಾರರು ಬಿಸಿಲಿನಲ್ಲಿ ಓಡಾಡುವುದರಿಂದ ಬಿಸಿಲು ಹಾಗೂ ಮಳೆಯಿಂದ ರಕ್ಷಣೆ ಹಾಗು ಮುಖ್ಯವಾಗಿ ಛತ್ರಿ ಬಳಸುವುದರಿಂದ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಬಹುದು ಎನ್ನುವ ಉದ್ದೇಶದಿಂದ ತಲಾ ಒಂದೊಂದು ಛತ್ರಿ ನೀಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ವಿ.ದೇವರಾಜ, ನೋಡೆಲ್ ಅಧಿಕಾರಿ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ತಾಲ್ಲೂಕು ಪಂಚಾಯಿತಿ ಸದಸ್ಯೆ ವಹೀದಾಬೇಗಂ, ವೈದ್ಯಾಧಿಕಾರಿ ಮುರಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಾಲಾಸಾಭಿ, ಮಂಜುನಾಥ, ಜಯರಾಮರೆಡ್ಡಿ, ಬೈರಾರೆಡ್ಡಿ, ಗಂಗಾಧರ, ಮುನಿಲಕ್ಷ್ಮಪ್ಪ, ನಾರಾಯಣಸ್ವಾಮಿ, ನಾಗರಾಜ, ಕೃಷ್ಣಪ್ಪ, ಶ್ರೀರಾಮರೆಡ್ಡಿ ಹಾಜರಿದ್ದರು.