ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ, ಭಾರತೀಯ ರೆಡ್‌ಕ್ರಾಸ್ ಸೊಸೈಟಿ, ಮೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಮೇಲೂರು ಮತ್ತು ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿ, ಮೇಲೂರು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಮೇಲೂರು ಡಾ.ಬಿ.ಆರ್.ಅಂಬೇಡ್ಕರ್ ಸಂಘ, ಶ್ರೀ ಮಹರ್ಷಿ ವಾಲ್ಮೀಕಿ ನಾಯಕರ ಯುವ ಘಟಕದ ಸಹಯೋಗದೊಂದಿಗೆ ಬುಧವಾರ ಮೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎಂ.ಹನುಮಯ್ಯ ಮಾತನಾಡಿದರು.
ಆರೋಗ್ಯವಾಗಿರುವವರು ನಿಯಮಿತವಾಗಿ ರಕ್ತದಾನ ಮಾಡುತ್ತಿರಬೇಕು. ಇದರಿಂದ ಸಾಕಷ್ಟು ಜನರ ಪ್ರಾರವನ್ನು ಉಳಿಸಬಹುದಾಗಿದೆ. ತಜ್ಞ ವೈದ್ಯರು ಗ್ರಾಮಕ್ಕೆ ಬಂದಿರುವಾಗ ಕಣ್ಣನ್ನು ತಪಾಸಣೆ ಮಾಡಿಸಿಕೊಳ್ಳಬೇಕೆಂದು ಅವರು ತಿಳಿಸಿದರು.
ಮಾನವನ ರಕ್ತ ಅಮೂಲ್ಯವಾದುದು. ಇದು ಮನುಷ್ಯನ ಜೀವ ಉಳಿಸುತ್ತದೆ, ರಕ್ತದಾನಕ್ಕೆ ಪರ್ಯಾಯ ವಸ್ತುವೆಂದರೆ ರಕ್ತ ಒಂದೇ. ಸಾಮಾನ್ಯವಾಗಿ ರಸ್ತೆ ಅಪಘಾತದಲ್ಲಿ ರಕ್ತಸ್ರಾವಗೊಂಡ ರೋಗಿಗಳು ಮತ್ತು ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಇಂಥ ಸಂದರ್ಭದಲ್ಲಿ ರಕ್ತದಾನಿಗಳು ನೀಡುವ ರಕ್ತ ಮಹತ್ವ ಪಡೆಯುತ್ತದೆ. ವೈದ್ಯಕೀಯ ತಜ್ಞರ ಪ್ರಕಾರ ಒಬ್ಬರ ರಕ್ತದಾನದಿಂದ ಮೂರು ಜನರ ಪ್ರಾಣ ಉಳಿಸಬಹುದಾಗಿದೆ ಎಂದು ಹೇಳಿ ರಕ್ತದಾನದ ಮಹತ್ವವನ್ನು ವಿವರಿಸಿದರು.
ಮೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ರಮೇಶ್ ಮಾತನಾಡಿ, ‘ದೇಶದಲ್ಲಿ ಲಕ್ಷಾಂತರ ಜನರು ಕಣ್ಣಗಳಿಲ್ಲದೇ ಬದುಕು ಸಾಗಿಸುತ್ತಿದ್ದಾರೆ. ಅಂಥವರ ಪಾಲಿಗೆ ನೇತ್ರ ದಾನದ ಮೂಲಕ ಬೆಳಕು ನೀಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಾವಿನ ಬಳಿಕ ಕಣ್ಣು ದಾನ ಮಾಡಲು ಮುಂದಾಗಬೇಕು. ತಜ್ಞ ವೈದ್ಯರು ಬಂದಿದ್ದಾರೆ. ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಿ ಎಂದು ಕರೆ ನೀಡಿದರು.
ಸುಮಾರು ಐವತ್ತು ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಸುಮಾರು ಎಂಬತ್ತು ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು.
ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ ರಾಜ್ಯ ಘಟಕದ ಉಪಾಧ್ಯಕ್ಷ ರಾಮಾಂಜಿನಪ್ಪ, ವಿಜಯಕುಮಾರ್, ಗೋವಿಂದಪ್ಪ, ಮಂಜುನಾಥ, ಪಿ.ನರಸಿಂಹಮೂರ್ತಿ, ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಕಾರ್ಯದರ್ಶಿ ಗುರುರಾಜರಾವ್, ಬಿ.ಕೆ.ನರಸಿಂಹಮೂರ್ತಿ, ಎಂ.ಪಿ.ಆಂಜಿನಪ್ಪ, ನಾರಾಯಣಸ್ವಾಮಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -