ಯುವಜನತೆ ಚುನಾವಣೆಯ ಘನತೆ ಕಾಪಾಡಬೇಕು – ಅಜಿತ್‌ ಕುಮಾರ್‌ ರೈ

0
528

ಯುವಜನತೆ ಚುನಾವಣೆಯ ಘನತೆ ಕಾಪಾಡಲು ಮುಂದಾಗಬೇಕು. ಮತದಾನದ ವೇಳೆ ಆಮೀಷಕ್ಕೆ ಬಲಿಯಾಗದೆ ನಿರ್ಭೀತಿಯಿಂದ, ನ್ಯಾಯಸಮ್ಮತ ರೀತಿಯಲ್ಲಿ ಮತದಾನ ಮಾಡುವ ಮೂಲಕ ಮತದಾನದ ಪಾವಿತ್ರ್ಯಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದು ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಗುರುವಾರ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ,ಕಣ್ಣಿನ ತಪಾಸಣಾ ಶಿಬಿರ, ಮತದಾನದ ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತದಾರರು ತಮ್ಮ ಹಕ್ಕು ಮತ್ತು ಕರ್ತವ್ಯಗಳ ಅರಿವು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆ, ಮತದಾನ ಮತ್ತು ಮತದಾರರು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ ಎನ್ನುವ ತಿಳಿವಳಿಕೆಯನ್ನು ಯುವಜನತೆ ಹೊಂದಿರಬೇಕು. ಮತದಾನದಲ್ಲಿ ಅಕ್ರಮ ಕಂಡುಬಂದಲ್ಲಿ ತಕ್ಷಣವೇ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಅಕ್ರಮ ತಡೆಯಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು.
ಪ್ರಾಂಶುಪಾಲ ಚಂದ್ರಾನಾಯಕ್‌ ಮಾತನಾಡಿ, ಬೆಲೆ ಕಟ್ಟಲಾಗದ ಅಮೂಲ್ಯ ರಕ್ತವು ಹತ್ತು ಹಲವು ಸಂದರ್ಭಗಳಲ್ಲಿ ತನ್ನದೇ ಆದ ಪ್ರಮುಖ ಪಾತ್ರ ವಹಿಸುವ ಮೂಲಕ ಅಮೂಲ್ಯ ಜೀವ ರಕ್ಷಣೆಗೆ ಸಂಜೀವಿನಿಯಾಗಿದೆ. ಇಂದಿನ ಯುವಜನತೆ ರಕ್ತದಾನ ಮಾಡುವ ಮನೋಭವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ರಕ್ತದಾನ ಶಿಬಿರದಲ್ಲಿ 45 ಯೂನಿಟ್‌ ರಕ್ತವನ್ನು ಸಂಗ್ರಹಿಸಲಾಯಿತು. ರಕ್ತದಾನಿಗಳಿಗೆ ಹಣ್ಣು, ಹಣ್ಣಿನ ರಸ, ಪ್ರಮಾಣ ಪತ್ರ ನೀಡಲಾಯಿತು.
ವಿದ್ಯುನ್ಮಾನ ಮತಯಂತ್ರ ಮತ್ತು ಈ ಚುನಾವಣೆಯಲ್ಲಿ ವಿಶೇಷವಾಗಿ ಬಳಸುತ್ತಿರುವ ಮತದಾನ ಖಾತ್ರಿ ಪಡಿಸುವ ವಿವಿಪಿಎಟಿ(ವೆರಿಫೈಯೆಬಲ್‌ ಪೇಪರ್‌ ಆಡಿಟ್‌ ಟ್ರಯಲ್‌) ರ ಬಳಕೆ ಮತ್ತು ಮತದಾನದ ಮಹತ್ವದ ಕುರಿತಾಗಿ ಅರಿವು ಮೂಡಿಸಲಾಯಿತು.
ಉಪನ್ಯಾಸಕರಾದ ವೆಂಕಟೇಶ್‌, ರಮೇಶ್‌, ರೆಡ್‌ಕ್ರಾಸ್‌ ಸಂಸ್ಥೆಯ ಕಾರ್ಯದರ್ಶಿ ಗುರುರಾಜರಾವ್‌ ಹಾಜರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!