19.5 C
Sidlaghatta
Sunday, July 20, 2025

ರೀಲರುಗಳಿಗೆ ಅರಿವು ಕಾರ್ಯಾಗಾರ, ರೀಲಿಂಗ್ ಘಟಕಗಳಲ್ಲಿ ಪರ್ಯಾಯ ಇಂಧನ, ಶಕ್ತಿ ಬಳಕೆ ಬಗ್ಗೆ ಚರ್ಚೆ

- Advertisement -
- Advertisement -

ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳಲ್ಲಿ ಸೌದೆಯನ್ನು ಉರುವಲನ್ನಾಗಿ ಬಳಸುತ್ತಿದ್ದು ಅದು ಮುಂದೊಂದು ದಿನ ಪರಿಸರದ ಮೇಲೆ ಇನ್ನಿಲ್ಲದ ಪರಿಣಾಮ ಬೀರುತ್ತದೆ ಎಂದು ಅತಿ ಸೂಕ್ಷ್ಮ, ಅತಿಸೂಕ್ಷ್ಮ, ಸಣ್ಣ ಕೈಗಾರಿಕೆಗಳ ಸಹಾಯಕ ನಿರ್ದೆಶಕ ಬಲದೇವ್ ಸಿಂಗ್ ಆತಂಕ ವ್ಯಕ್ತಪಡಿಸಿದರು.
ನಗರದ ಸಾರಿಗೆ ಬಸ್ ನಿಲ್ದಾಣ ಬಳಿ ಇರುವ ಸರ್ಕಾರಿ ರೇಷ್ಮೆ ಮೊಟ್ಟೆ ಬಿತ್ತನೆ ಕೋಠಿ ಸಭಾಂಗಣದಲ್ಲಿ ಸೋಮವಾರ ರೀಲರುಗಳಿಗೆ ಹಮ್ಮಿಕೊಂಡಿದ್ದ ಪರ್ಯಾಯ ಇಂಧನ, ಶಕ್ತಿ ಬಳಕೆ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ದಿನವೂ ಉರುವಲಿಗಾಗಿ ಮರಗಿಡಗಳನ್ನು ಕಟಾವು ಮಾಡಿದಂತೆಲ್ಲಾ ಅದು ಮುಂದೊಂದು ದಿನ ಮನುಕುಲಕ್ಕೆ ಮಾರಕವಾಗುವಷ್ಟು ಪರಿಸರದ ಮೇಲೆ ವ್ಯತರಿಕ್ತ ಪರಿಣಾಮ ಬೀರಲಿದೆ. ಅದನ್ನು ತಡೆಯುವುದು ಬಿಡುವುದು ನಮ್ಮ ಕೈಯಲ್ಲಿ ಇದೆ ಎಂದರು.
ಆದರು ನಾವು ಆ ಬಗ್ಗೆ ಆಲೋಚನೆ ಮಾಡದೆ ಈ ದಿನದ ಮಟ್ಟಿಗೆ ಮಾತ್ರವೇ ಆಲೋಚಿಸುತ್ತಿದ್ದೇವೆ, ನಾಳಿನ ದಿನಗಳ ಬಗ್ಗೆ ಚಿಂತನೆ ಮಾಡದ ನಾವೇ ಮುಂದಿನ ಅನಾಹುತಗಳಿಗೆ ಕಾರಣವಾಗುತ್ತಿದ್ದೇವೆ ಎಂದು ವಿವರಿಸಿದರು.
ರೀಲಿಂಗ್ ಘಟಕಗಳಲ್ಲಿ ಸೌದೆ ಬದಲಿಗೆ ಪರ್ಯಾಯವಾಗಿ ಏನನ್ನು ಬಳಸಬಹದು, ಯಾವ ಶಕ್ತಿಯನ್ನು ಉಪಯೋಗಿಸಬಹುದು, ಅದು ಪರಿಸರ ಪ್ರೇಮಿಯೂ, ಮಿತ ಆರ್ಥಿಕ ವ್ಯಯಕ್ಕೆ ಕಾರಣವಾಗಿರಬೇಕು. ಆ ನಿಟ್ಟಿನಲ್ಲಿ ಪ್ರಯೋಗಗಳು ಬಳಕೆಯೂ ಆಗಬೇಕಿದೆ ಎಂದರು.
ಈ ನಿಟ್ಟಿನಲ್ಲಿ ಕೇಂದ್ರದ ಸಣ್ಣ ಅತಿ ಸಣ್ಣ ಕೈಗಾರಿಕೆ ಇಲಾಖೆಯು ರೀಲರುಗಳಲ್ಲಿ ಅರಿವು ಮೂಡಿಸಿ ಈ ಬಗ್ಗೆ ಸಲಹೆ ಸೂಚನೆ ಆಕ್ಷೇಪಣೆಗಳನ್ನು ಆಹ್ವಾನಿಸುತ್ತಿದೆ. ಎಲ್ಲರ ಸಲಹೆ ಸೂಚನೆ ಮೇರೆಗೆ ಪರ್ಯಾಯ ಇಂಧನ ಬಳಕೆ ಕುರಿತು ಪ್ರಯೋಗಗಳನ್ನು ನಡೆಸಲಿದೆ. ಅಂತಿಮವಾಗಿ ಪರಿಸರಕ್ಕೆ ಮಾರಕವಾಗದ, ಆರ್ಥಿಕ ಮಿತವ್ಯಯವೂ ಆಗಿರುವ ಶಕ್ತಿಯನ್ನು ಬಳಸಿಕೊಳ್ಳಲು ಮುಂದಾಗಲಿದೆ, ಇದಕ್ಕೆ ಎಲ್ಲ ರೀಲರುಗಳು ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಮಾತನಾಡಿ, ಶಿಡ್ಲಘಟ್ಟ ನಗರದಲ್ಲಿ ಪ್ರತಿ ದಿನವೂ ೫ ಸಾವಿರ ಕೆಜಿಯಷ್ಟು ರೇಷ್ಮೆ ನೂಲನ್ನು ಬಿಚ್ಚಾಣಿಕೆ ಮಾಡಲಾಗುತ್ತಿದೆ. ಪ್ರತಿ ಕೆಜಿ ರೇಷ್ಮೆ ನೂಲು ಬಿಚ್ಚಾಣಿಕೆಗೆ ಸುಮಾರು ೨೦ ಟನ್‌ನಷ್ಟು ಸೌದೆಯನ್ನು ಉರುವಲನ್ನಾಗಿ ಮಾಡಲಾಗುತ್ತಿದ್ದು ಅದರಂತೆ ಪ್ರತಿ ದಿನವೂ ೧೦೦ ಟನ್‌ನಷ್ಟು ಮರಗಳಿಗೆ ಕೊಡಲಿ ಬೀಳುತ್ತಿದೆ ಎಂದು ಅಂಕಿ ಸಂಖ್ಯೆಗಳನ್ನು ಮುಂದಿಟ್ಟರು.
ಪ್ರತಿ ದಿನಕ್ಕೆ ೧೦೦ ಟನ್, ತಿಂಗಳಿಗೆ ೩ ಸಾವಿರ ಟನ್ ಹೀಗೆ ವರ್ಷಕ್ಕೆ ಮರಗಳನ್ನು ಕಡಿಯತ್ತಾ ಸಾಗಿದರೆ ಮುಂದೊಂದು ದಿನ ಉಸಿರಾಡಲು ಆಮ್ಲ ಜನಕ ಇಲ್ಲದೆ ನಾವು ಸಾಯಬೇಕಾಗುತ್ತದೆ. ಆದ್ದರಿಂದ ನೀವು ನಮ್ಮಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ ಸೀಮಿತವಾಗಬೇಡಿ. ಬದಲಿಗೆ ಪರ್ಯಾಯ ಇಂಧನ, ಶಕ್ತಿ ಬಳಕೆಗೆ ಪ್ರಯೋಗಗಳನ್ನು ಮಾಡಿ ಪ್ರಾತ್ಯಕ್ಷಿತೆ ಮೂಲಕ ಹೊಸ ಆವಿಷ್ಕಾರಗಳನ್ನು ಮಾಡಿ ಬಳಕೆಗೆ ಬಿಡಿ ಎಂದು ಒತ್ತಾಯಿಸಿದರು.
ವಿಶ್ವೇಶ್ವರಯ್ಯ ಸಣ್ಣ ಕೈಗಾರಿಕೆಗಳ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲೂರು ಶ್ರೀನಿವಾಸ್ ಮೂರ್ತಿ, ಶಕ್ತಿ ಮತ್ತು ಸಂಪನ್ಮೂಲ ತರಬೇತಿ ಕೇಂದ್ರದ ಸತೀಶ್ ಕುಮಾರ್, ಕೆನರಾ ಬ್ಯಾಂಕ್‌ನ ರಾಘವೇಂದ್ರ, ಕೈ ಮಗ್ಗ ಮತ್ತು ಜವಳಿ ಇಲಾಖೆಯ ಜಗದೀಶ್, ಮಹಿಳಾ ಮತ್ತು ಮಕ್ಕಳ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷೆ ಪದ್ಮಪ್ರಕಾಶ್, ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ ಮಹೇಶ್, ರಾಂ ಕುಮಾರ್, ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ ಮತ್ತಿತರರು ಹಾಜರಿದ್ದರು.
ರೀಲರ್ಸ್‌್ಸ್ ಅಸೋಸಿಯೇಷನ್ ಅಧ್ಯಕ್ಷ ಅನ್ಸರ್ ಖಾನ್, ರೀಲರುಗಳಾದ ಮಂಜುನಾಥ್, ಸಾಕ್, ಮಹಬೂಬ್ ಪಾಷ, ಅಜೀಜ್ ಖಾನ್, ನರಸಿಂಹಮೂರ್ತಿ ಮತ್ತಿತರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!