ತಾಲ್ಲೂಕಿನ ಜೋಟ್(ಸಿಲ್ಕ್ ವೇಸ್ಟ್) ಖರೀದಿದಾರರ ಮೇಲೆ ಕೆಲವು ರೀಲರುಗಳು ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ಜೋಟ್ ಖರೀದಿದಾರ ಎಸ್.ಪಿ.ಎಸ್. ಅನ್ಸರ್ ತಿಳಿಸಿದರು.
ನಗರದಲ್ಲಿ ಅವರು ಗುರುವಾರ ಪತ್ರಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ತಾಲ್ಲೂಕಿನಲ್ಲಿ ಜೋಟ್ ವ್ಯಾಪಾರವನ್ನು ಹಲವಾರು ಮಂದಿ ಮಾಡುತ್ತಿದ್ದಾರೆ. ಹೊರಗಿನಿಂದ ಬರುವ ವ್ಯಾಪಾರಸ್ಥರಿಗೆ ನಾವು ಯಾವುದೇ ತೊಂದರೆಯನ್ನು ನೀಡಿಲ್ಲ. ವಾತಾವರಣದ ವ್ಯತ್ಯಾಸದಿಂದ ತೂಕದಲ್ಲಿ ಏರುಪೇರಾಗುವುದರಿಂದ ಬೆಲೆಯನ್ನು 20 ರಿಂದ 30 ರೂ ಕಡಿಮೆ ಮಾಡಿರುವುದು ಸತ್ಯ. ಆದರೆ ಕೆಲ ರೀಲರುಗಳು ಆರೋಪಿಸಿರುವಂತೆ 200 ರೂ ಕಡಿಮೆ ಮಾಡಿಲ್ಲ ಎಂದು ಹೇಳಿದರು.
ಪರ ಊರಿನ ವ್ಯಾಪಾರಸ್ಥರು ಒಂದು ಕೆ.ಜಿ ಜೋಟಿಗೆ 500 ರಿಂದ 530 ರೂ ವರೆಗೂ ಖರೀದಿಸಿದರೆ, ನಾವು 450 ರಿಂದ 480 ರೂ ವರೆಗೂ ಬೆಲೆ ನೀಡುತ್ತೇವೆ. ನಮಗೂ ಅವರಿಗೂ 30 ರಿಂದ 50 ರೂ ವ್ಯತ್ಯಾಸಕ್ಕೆ ಕಾರಣಗಳಿವೆ. ನಾವುಗಳು ವರ್ಷ ಪೂರ್ತಿ ಪ್ರತಿ ವಾರ 10 ರಿಂದ 15 ಟನ್ ಜೋಟ್ ಖರೀದಿಸುತ್ತೇವೆ. ಎಲ್ಲಾ ಗುಣಮಟ್ಟದ ಜೋಟ್ ನಾವು ಖರೀದಿಸುತ್ತೇವೆ. ಮಳೆ, ಬಿಸಿಲು, ಗಾಳಿ, ಸೈಕ್ಲೋನ್ ಮುಂತಾದ ವಿವಿಧ ಹವಾಮಾನಗಳಲ್ಲಿ ಜೋಟ್ ತೂಕ ಏರುಪೇರಾಗುತ್ತದೆ. ಬೇರೆ ಊರಿನವರು ಕೇವಲ ಒಳ್ಳೆಯ ಹವಾಮಾನವಿದ್ದಾಗ, ಜೋಟ್ ಬೆಲೆ ಕಡಿಮೆಯಿದ್ದಾಗ ಮಾತ್ರ ಬಂದು ಉತ್ತಮ ಗುಣಮಟ್ಟದ ಜೋಟ್ ಖರೀದಿಸುತ್ತಾರಷ್ಟೆ. ನಾವುಗಳು ಇಲ್ಲಿ ಕೆಲವಾರು ರೀಲರುಗಳಿಗೆ 50 ಸಾವಿರದಿಂದ 2 ಲಕ್ಷ ರೂಗಳವರೆಗೆ ಮುಂಗಡ ಹಣವನ್ನು ನೀಡಿ ನಂತರ ಜೋಟ್ ತೂಕ ಹಾಕಿ ಜಮಾ ಹಾಕುವ ಪರಿಪಾಟವಿಟ್ಟುಕೊಂಡಿದ್ದೇವೆ. ನಾವು ಯಾವುದೇ ಪರ ಊರಿನ ವ್ಯಾಪಾರಿಗೂ ತೊಂದರೆ ಮಾಡಿಲ್ಲ, ಮಾಡುವುದೂ ಇಲ್ಲ. ವಿನಾಕಾರಣ ಕೆಲ ರೀಲರುಗಳು ನಮ್ಮ ತೇಜೋವಧೆ ಮಾಡಲು ಪೊಲೀಸ್ ಠಾಣೆಯ ಮುಂದೆ ಜನರನ್ನು ಗುಂಪು ಗೂಡಿಸಿ ಜೋಟ್ ವ್ಯಾಪಾರಸ್ಥರ ವಿರುದ್ಧ ಆರೋಪ ಮಾಡಿದ್ದಾರೆ ಎಂದು ತಿಳಿಸಿದರು.
ಸಯ್ಯದ್ ಇದಾಯತ್ತುಲ್ಲ, ಡಿ.ಮಹಬೂಬ್ ಪಾಷ, ಮಹಮ್ಮದ್ ಗೌಸ್ ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -