ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯತಿಯ ದೊಣ್ಣಹಳ್ಳಿಯಲ್ಲಿ ರೇಷ್ಮೆಗೆ ಬೆಲೆ ಬರದೆ ಬೇಸತ್ತು ತಮ್ಮ ಜಮೀನಿನಲ್ಲಿದ್ದ ಹಿಪ್ಪುನೇರಳೆ ಸೊಪ್ಪನ್ನು ಉಳುಮೆ ಮಾಡಿ ತೆಗೆದುಹಾಕುತ್ತಿದ್ದ ರೈತರನ್ನು ರೈತಮುಖಂಡರು ಹಾಗೂ ಅಧಿಕಾರಿಗಳು ತಡೆದ ಘಟನೆ ಶುಕ್ರವಾರ ನಡೆದಿದೆ.
ತಾಲ್ಲೂಕಿನ ದೊಣ್ಣಹಳ್ಳಿಯಲ್ಲಿ ಶೇಕಡಾ 90 ರಷ್ಟು ರೈತರು ರೇಷ್ಮೆ ಬೇಸಾಯವನ್ನೇ ಅವಲಂಭಿಸಿದ್ದಾರೆ. ಗ್ರಾಮದ ರೈತರಾದ ರಾಮಣ್ಣ, ಬೈರೇಗೌಡ, ಸೊಣ್ಣಪ್ಪ, ವೆಂಕಟರೆಡ್ಡಿ ಮತ್ತು ಚೊಕ್ಕರೆಡ್ಡಿ ತಮ್ಮ ಹಿಪ್ಪುನೇರಳೆ ಸೊಪ್ಪಿನ ತೋಟದಲ್ಲಿ ಟ್ರಾಕ್ಟರ್ ನಿಂದ ಉಳುಮೆ ಮಾಡಿ ನಾಶಪಡಿಸಲು ಪ್ರಾರಂಭಿಸಿದ್ದರು. ಐವರು ರೈತರು ತಮ್ಮ ಹಿಪ್ಪುನೇರಳೆ ಜಮೀನಿನ ತಲಾ ಒಂದು ಎಕರೆ ಉತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಹಾಗೂ ರೇಷ್ಮೆ ಇಲಾಖೆಯ ಅಧಿಕಾರಿಗಳು ಸರ್ಕಾರದಿಂದ ತಾಂತ್ರಿಕ ಸಮಿತಿಯು ಸಧ್ಯದಲ್ಲೇ ನೀಡುವ ವರದಿ ಆಧರಿಸಿ ದರ ನಿಗದಿ ಮಾಡಲಾಗುತ್ತದೆ. ಇದರಿಂದ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುತ್ತದೆ ಎಂದು ಮನವೊಲಿಸಿದರು.
‘ರೇಷ್ಮೆ ಬೆಳೆಯನ್ನು ನಂಬಿ ಕೊಳವೆ ಬಾವಿ ಕೊರೆಸಲು ಮಾಡಿರುವ ಸಾಲ ತೀರಿಸಲಾಗುತ್ತಿಲ್ಲ. ರೇಷ್ಮೆ ಗೂಡಿನ ಬೆಲೆ ಕುಸಿದಿದ್ದು, ಮಾರುಕಟ್ಟೆಗೆ ರೇಷ್ಮೆ ಗೂಡನ್ನು ತೆಗೆದುಕೊಂಡು ಹೋಗಿ ತರುವ ಹಣ ಬಡ್ಡಿಗೆ ಸರಿಹೋಗದಂತಾಗಿದೆ. ಕೊಳವೆ ಬಾವಿ ಕೊರೆಸಿ ನೀರು ಹೊರತೆಗೆಯುವಷ್ಟರಲ್ಲಿ ಲಕ್ಷಾಂತರ ರೂಗಳನ್ನು ವ್ಯಯಿಸಬೇಕಾಗುತ್ತದೆ. ಅದನ್ನು ಸಾಲ ಮಾಡಿರುತ್ತೇವೆ. ಎರಡು ಮೂರು ತಿಂಗಳುಗಳಲ್ಲಿ ಕೊಳವೆ ಬಾವಿಯು ಬತ್ತಿದ್ದು, ಟ್ಯಾಂಕರುಗಳಿಂದ ನೀರು ತರಬೇಕಾಗುತ್ತದೆ. ಇಷ್ಟು ಹಣ ವ್ಯಯಿಸಿ ಮನೆ ಮಂದಿಯೆಲ್ಲಾ ಕಷ್ಟಪಟ್ಟು ದುಡಿದು ಗೂಡನ್ನು ಬೆಳೆದು ಮಾರುಕಟ್ಟೆಯಲ್ಲಿ ತಂದಾಗ ಒಂದು ಕೆಜಿ ಗೆ 150 ರೂ ಬಂದರೆ ರೈತನು ಬದುಕುವುದು ಹೇಗೆ. ಹಿಪ್ಪುನೇರಳೆ ತೆಗೆದು ಚಿಲ್ಲರೆ ಬೆಳೆ ಬೆಳೆಯಲು ಪ್ರಯತ್ನಿಸುತ್ತೇವೆ’ ಎಂದು ರೈತ ರಾಮಣ್ಣ ತಮ್ಮ ಕಷ್ಟವನ್ನು ವಿವರಿಸಿದರು.
‘ರೈತ ವಿರೋಧಿ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ರೇಷ್ಮೆ ಉದ್ದಿಮೆಯನ್ನು ಉಳಿಸಲು ಸರ್ಕಾರ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ರೇಷ್ಮೆ ನಾಡೆಂದು ಪ್ರಸಿದ್ಧಿ ಪಡೆದಿದ್ದ ತಾಲ್ಲೂಕಿನಲ್ಲಿ ರೇಷ್ಮೆ ಬೆಳೆಯನ್ನು ಕಿತ್ತು ತೆಗೆಯುವ ಪರಿಸ್ಥಿತಿ ರೈತರಿಗೆ ನಿರ್ಮಾಣವಾಗಿದೆ. ಒಂದು ಕಡೆ ಅಂತರ್ಜಲ ಕುಸಿತ, ಮತ್ತೊಂದೆಡೆ ಬೆಲೆ ಕುಸಿತದಿಂದಾಗಿ ರೈತರು ಹೈರಾಣಾಗಿದ್ದಾರೆ. ಸರ್ಕಾರ ಮೀಟರ್ ಬಡ್ಡಿ ತಡೆಯಲು ಕಾನೂನನ್ನು ರೂಪಿಸಿದ್ದು, ಇದರಿಂದ ರೈತರಿಗೆ ಎಲ್ಲೂ ಹಣ ಸಿಗದಂತಾಗಿದೆ. ಪರ್ಯಾಯವಾಗಿ ಸರ್ಕಾರ ಬ್ಯಾಂಕುಗಳ ಮೂಲಕ ಸುಲಭ ಬಡ್ಡಿ ದರದಲ್ಲಿ ಹಣ ಸಿಗುವಂತಹ ವ್ಯವಸ್ಥೆಯನ್ನಾದರೂ ಕಲ್ಪಿಸಬೇಕು. ರೈತರನ್ನು ನಾವು ತಾಲ್ಲೂಕು ರೈತ ಸಂಘದ ಸದಸ್ಯರು ಹಾಗೂ ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಿದ್ದೇವೆ. ಇದು ತಾತ್ಕಾಲಿಕವಷ್ಟೆ. ಸರ್ಕಾರ ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ರೇಷ್ಮೆ ಉದ್ದಿಮೆ ನಶಿಸುತ್ತದೆ. ರೈತ ಬೀದಿಪಾಲಾಗುತ್ತಾನೆ’ ಎಂದು ತಾಲ್ಲೂಕು ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ರವಿಪ್ರಕಾಶ್ ತಿಳಿಸಿದರು.
ರೇಷ್ಮೆ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ವಲಯಾಧಿಕಾರಿ ತಿಮ್ಮಪ್ಪ, ತಾಲ್ಲೂಕು ರೈತ ಸಂಘ ಹಾಗೂ ಹಸಿರುಸೇನೆಯ ಭಕ್ತರಹಳ್ಳಿ ಪ್ರತೀಶ್, ಮಾರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -