ನಗರಕ್ಕೆ ಮಂಗಳವಾರ ಭೇಟಿ ನೀಡಿದ್ದ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಬಿಸೇಗೌಡ ಅವರಿಗೆ ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಸದಸ್ಯರು ರೇಷ್ಮೆ ಕೃಷಿ ಬಿಕ್ಕಟ್ಟನ್ನು ಬಗೆಹರಿಸಲು ಪ್ರಯತ್ನಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದರು.
ಮದನಪಲ್ಲಿಗೆ ರೇಷ್ಮೆ ಸಮಾವೇಶಕ್ಕೆ ತೆರಳುವಾಗ ಮಾರ್ಗ ಮಧ್ಯೆ ಶಿಡ್ಲಘಟ್ಟಕ್ಕೆ ಭೇಟಿ ನೀಡಿದ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಬಿಸೇಗೌಡ ಅವರನ್ನು ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿದ ರೇಷ್ಮೆ ಬೆಳೆಗಾರರು ರೇಷ್ಮೆ ಕೃಷಿಕರು ಸಂಕಷ್ಟದಲ್ಲಿರುವ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಳ್ಳೂರು ಶಿವಣ್ಣ, ರೇಷ್ಮೆ ಗೂಡಿನ ಬೆಲೆ ಗಣನೀಯವಾಗಿ ಕುಸಿಯಲು ಕೇಂದ್ರ ಸರ್ಕಾರ ಆಮದು ಸುಂಕವನ್ನು ಕಡಿತಗೊಳಿಸಿರುವುದಾಗಿದೆ. ತಕ್ಷಣ ಕೇಂದ್ರ ಸರ್ಕಾರ ಆಮದು ಸುಂಕವನ್ನು ಶೇಕಡ 50 ಕ್ಕೆ ಏರಿಸುವಂತೆ ರೇಷ್ಮೆ ಮಂಡಳಿ ಒತ್ತಾಯಿಸಬೇಕು.
ಕೇಂದ್ರ ರೇಷ್ಮೆ ಮಂಡಳಿಯ ಆಪತ್ತು ನಿಧಿಯಿಂದ ರಾಜ್ಯದ ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ನೆರವನ್ನು ಒದಗಿಸಬೇಕು. ರೇಷ್ಮೆ ಗೂಡು ಬೆಳೆಯುವ ಎಲ್ಲಾ ರೈತರಿಗೂ ಸಹಾಯಧನ ನೀಡಬೇಕು. ರೇಷ್ಮೆ ಉದ್ದಿಮೆಯ ಆಧಾರ ಸ್ತಂಭಗಳಾದ ದ್ವಿತಳಿ ಮತ್ತು ಮಿಶ್ರತಳಿ ಪ್ರಗತಿಪರ ರೇಷ್ಮೆ ಬೆಳೆಗಾರರನ್ನು ಉಳಿಸಿಕೊಳ್ಳುವುದು ಅನಿವಾರ್ಯ. ಮಿಶ್ರತಳಿ ಗೂಡಿಗೆ ಒಂದು ಕೆಜಿಗೆ 60 ರೂಪಾಯಿ ಮತ್ತು ದ್ವಿತಳಿ ಗೂಡಿಗೆ 80 ರೂಪಾಯಿ ಸಹಾಯಧನ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕು. ಕೇಂದ್ರ ರೇಷ್ಮೆ ಮಂಡಳಿಯು ರಾಜ್ಯ ರೇಷ್ಮೆ ಬೆಳೆಗಾರರಿಗೆ ನೆರವಾಗುವ ಸಿ.ಡಿ.ಪಿ ಯೋಜನೆಯನ್ನು ಮುಂದುವರೆಸಬೇಕು ಎಂದು ತಿಳಿಸಿದರು.
ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಸದಸ್ಯರಿಂದ ರೇಷ್ಮೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಳಿ ನಂತರ ಮಾತನಾಡಿದ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಬಿಸೇಗೌಡ, ‘ರೇಷ್ಮೆ ಆಮದು ಸುಂಕವನ್ನು ಹೆಚ್ಚಿಬೇಕೆಂದು ಸಂಸದರು ಹಾಗೂ ಕೇಂದ್ರದ ಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ. ಮುಂದಿನ ಲೋಕಸಭೆ ಅಧಿವೇಶನದೊಳಗೆ ಸಂಬಂಧಪಟ್ಟ ಮಂತ್ರಿಗಳಿಗೆ ಈ ಬಗ್ಗೆ ವಿವರವಾಗಿ ತಿಳಿಸಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲಾಗುವುದು’ ಎಂದು ತಿಳಿಸಿದರು.
- Advertisement -
- Advertisement -
- Advertisement -
- Advertisement -