ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇವತ್ತಿನ ಪರಿಸ್ಥಿತಿಯನ್ನು ಪರಿಶೀಲಿಸಿದಾಗ ಯಾವುದೇ ಸಮಸ್ಯೆ ಕಂಡುಬರಲಿಲ್ಲ. ಸಾಮಾಜಿಕ ಅಂತರವಾನ್ನು ಕಾಯ್ದುಕೊಂಡಿದ್ದಾರೆ. ನಿರಂತರವಾಗಿ ಗಮನಿಸುತ್ತಿರುತ್ತೇವೆ. ಮುಂದೆ ಏನಾದರೂ ಜನರು ಹೆಚ್ಚಾಗಿ ಬಂದಲ್ಲಿ ಆಗ ಪರೀಶಿಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಪೊಲೀಸ್ ಎಸ್.ಪಿ ಅವರೊಂದಿಗೆ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಪರೀಶೀಲನೆ ನಡೆಸಿದೆವು. ಒಂದು ಟ್ರೇ ಬಿಟ್ಟು ಮತ್ತೊಂದು ಟ್ರೇಗೆ ಗೂಡು ಹಾಕಿಸುತ್ತಿದ್ದು, ಮೇಲ್ನೋಟಕ್ಕೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರುವುದು ಕಂಡುಬಂದಿದೆ. ಸಧ್ಯಕ್ಕೆ ಏನೂ ಸಮಸ್ಯೆಯಿಲ್ಲ. ರೇಷ್ಮೆ ಗೂಡಿನ ಮಾರುಕಟ್ಟೆ ಪ್ರವೇಶಿಸುವಾಗಲೇ ಮಾಸ್ಕ್ ಧರಿಸಬೇಕೆನ್ನುವುದು, ಸ್ಯಾನಿಟೈಸರ್ ನೀಡುವುದು, ಗುರುತಿನ ಚೀಟಿ ಇದ್ದವರು ಮಾತ್ರ ಪ್ರವೇಶ, ಆರೋಗ್ಯ ಸಿಬ್ಬಂದಿಯಿಂದ ಪರೀಕ್ಷೆ, ಸಾಮಾಜಿಕ ಅಂತರ ಮುಂತಾದವುಗಳನ್ನು ಖಡ್ಡಾಯವಾಗಿ ನಡೆಸಲಾಗುತ್ತಿದೆ. ಯಾರೂ ಆತಂಕ ಪಡುವ ಅವಶ್ಯಕತೆಯಿಲ್ಲ. ಹಾಗೆಯೇ ಎಲ್ಲರೂ ಖಡ್ಡಾಯವಾಗಿ ನಿಯಮಗಳನ್ನು ಪಾಲಿಸಲೇ ಬೇಕು ಎಂದರು.
ಗೌರಿಬಿದನೂರಿನಲ್ಲಿ ಹತ್ತು ಮಂದಿ ಕೊರೊನಾ ಪೀಡಿತರಲ್ಲಿ ಒಬ್ಬರು ಮೃತಪಟ್ಟಿದ್ದರು. ಅವರ ಸಂಪರ್ಕ ಹೊಂದಿದ್ದ ಅಷ್ಟೂ ಜನರ ಪರೀಕ್ಷೆಯನ್ನು ನಡೆಸಿದ್ದೆವು. ಅವರುಗಳಿಗೆ ಸೋಂಕು ಹರಡಿಲ್ಲ ಎಂಬುದು ತಿಳಿದುಬಂದಿದೆ. ಹಾಗೆಂದು ನಾವುಗಳು ಉದಾಸೀನ ಮಾಡುವಂತಿಲ್ಲ. ಏಪ್ರಿಲ್ 14 ರವರೆಗೂ ಲಾಕ್ ಡೌನ್ ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.
ನಮ್ಮಲ್ಲಿನ ದ್ರಾಕ್ಷಿ ಬೆಳೆಗಾರರು ಬೆಂಗಳೂರಿಗಿಂತ ಹೆಚ್ಚಾಗಿ ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ ಮುಂತಾದ ರಾಜ್ಯಗಳಿಗೆ ಕಳುಹಿಸುತ್ತಿದ್ದರು. ಈಗ ಕೊರೊನಾ ಭೀತಿಯಿಂದ ಬೇರೆ ರಾಜ್ಯಗಳಲ್ಲಿ ಗ್ರಾಹಕರು ಸಿಗುತ್ತಿಲ್ಲ. ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತೋಟಗಾರಿಕಾ ಸಚಿವರು ಬೆಂಗಳೂರಿನಲ್ಲಿ ಮಾರುಕಟ್ಟೆಯನ್ನು ರೂಪಿಸಿದ್ದು, ಇನ್ನೆರಡು ದಿನಗಳಲ್ಲಿ ದ್ರಾಕ್ಷಿಯನ್ನು ಎಲ್ಲಿಗೆ ಕಳುಹಿಸಬೇಕೆಂದು ತಿಳಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ತಂಡವೊಂದನ್ನು ರಚಿಸಿದ್ದು, ಆ ತಂಡ ಮಾರುಕಟ್ಟೆ ಸಿಗದ ರೈತರಿಗೆ ಮತ್ತು ಅಗತ್ಯವಿರುವವರಿಗೆ ಕೊಂಡಿಯಂತೆ ಕಾರ್ಯನಿರ್ವಹಿಸುತ್ತದೆ. ರೈತರು ಬೆಳೆದ ಯಾವುದೇ ಬೆಳೆ ನಷ್ಟವಾಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಜಿಲ್ಲೆಯಲ್ಲಿ ಮೂರು ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಇನ್ನುಳಿದ ಮೂರು ತಾಲ್ಲೂಕುಗಳನ್ನೂ ಸಹ ಬರ ಪೀಡಿತವೆಂದು ಘೋಷಿಸುವಂತೆ ಸರ್ಕಾರಕ್ಕೆ ವರದಿ ಕಳುಹಿಸಿದ್ದೇನೆ. ಎಲ್ಲೆಲ್ಲಿ ನೀರಿನ ಕೊರತೆಯಿದೆಯೋ ಅಲ್ಲಿ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡುವಂತೆ ಆಯಾ ತಾಲ್ಲೂಕಿನ ತಹಶೀಲ್ದಾರ್ ಹಾಗೂ ಇಒ ಅವರಿಗೆ ಸೂಚಿಸಿದ್ದೇನೆ ಎಂದು ನುಡಿದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ನಮ್ಮೆಲ್ಲಾ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವುದರಿಂದ ಕೊರೊನಾ ಮಾರಿ ಶಿಡ್ಲಘಟ್ಟ ತಾಲ್ಲೂಕನ್ನು ಪ್ರವೇಶಿಸಿಲ್ಲ. ಬರುವುದೂ ಬೇಡ. ಸರ್ಕಾರ ಹಾಗೂ ಆರೋಗ್ಯ ಇಲಾಖೆ ನೀಡಿರುವ ಸೂಚನೆಗಳನ್ನು ಜನರೆಲ್ಲರೂ ತಪ್ಪದೇ ಪಾಲಿಸಬೇಕು ಎಂದರು.
ಪೊಲೀಸ್ ಎಸ್.ಪಿ. ಜಿ.ಕೆ.ಮಿಥುನ್ ಕುಮಾರ್, ತಹಶೀಲ್ದಾರ್ ಕೆ.ಅರುಂಧತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಪೌರಾಯುಕ್ತ ತ್ಯಾಗರಾಜ್, ಆರ್.ಐ.ವಿಶ್ವನಾಥ್, ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್, ಸಬ್ ಇನ್ಸ್ ಪೆಕ್ಟರ್ ಲಿಯಾಖತ್ತುಲ್ಲ, ರೇಷ್ಮೆ ಗೂಡಿನ ಮಾರುಕಟ್ಟೆ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







