ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಮಂಗಳವಾರ ಭೇಟಿ ನೀಡಿದ್ದ ರೇಷ್ಮೆ ಇಲಾಖೆಯ ಆಯುಕ್ತ ಸಿ.ಜಿ.ವೃಷಭೇಂದ್ರ ಮೂರ್ತಿ ಅವರಿಗೆ ರೇಷ್ಮೆ ಬೆಳೆಗಾರರು, ರೀಲರುಗಳು ಹಾಗೂ ರೈತ ಮುಖಂಡರು ತಮ್ಮ ಸಮಸ್ಯೆಗಳನ್ನು ವಿವರಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ರೇಷ್ಮೆ ಬೆಳೆಗಾರರಿಗೆ ಮೊಟ್ಟೆ ಧಾರಣೆ ಹೆಚ್ಚಳವಾಗಿದೆ. ನೂರು ರೇಷ್ಮೆ ಮೊಟ್ಟೆಗೆ ೩,೫೦೦ ರಿಂದ ೩,೮೦೦ ರೂ ಇದೆ. ಅದನ್ನು ಕಡಿಮೆ ಮಾಡಬೇಕು. ಹನಿ ನೀರಾವರಿ ಸಲಕರಣೆಗಳನ್ನು ಐದು ವರ್ಷಕ್ಕೊಮ್ಮೆ ಹೊಸತು ನೀಡಬೇಕು. ಹುಳುಮನೆ, ಶೆಡ್ ನಿರ್ಮಾಣಕ್ಕೆ ಹೆಚ್ಚು ಹಣ ನೀಡಿ. ಆಧುನಿಕ ಯಂತ್ರೋಪಕರಣಗಳನ್ನು ರೇಷ್ಮೆ ಬೆಳೆಗಾರರಿಗೆ ಒದಗಿಸಿ. ರೇಷ್ಮೆ ಗೂಡಿನ ಧಾರಣೆ ಕುಸಿದಾಗ ಒಂದು ಕೆ.ಜಿಗೆ ೧೦೦ ರೂ ಕೊಡಬೇಕು. ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ ಮುಂತಾದ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿ. ಮಳೆಗಾಲದಲ್ಲಿ ರೇಷ್ಮೆ ಗೂಡು ಬಿಚ್ಚಾಣಿಕೆಯ ಪರೀಕ್ಷಣೆಯ ನೆಪದಲ್ಲಿ ರೀಲರುಗಳು ಕೇ.ಜಿಗಟ್ಟಲೆ ರೇಷ್ಮೆ ಗೂಡನ್ನು ರೈತರಿಂದ ಪಡೆದು ತೆಗೆದುಕೊಂಡು ಹೋಗುವ ಕೆಟ್ಟ ಅಭ್ಯಾಸವಿದೆ. ಅದನ್ನು ತಪ್ಪಿಸಲು ರೇಷ್ಮೆ ಗೂಡಿನ ಮಾರುಕಟ್ಟೆಯ ಒಳಗೆ ಪರೀಕ್ಷೆ ಮಾಡುವ ವ್ಯವಸ್ಥೆಯನ್ನು ಕಲ್ಪಿಸಬೇಕು. ಚಿಕ್ಕಬಳ್ಳಾಪುರದಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆಯ ಮುಂಭಾಗದಲ್ಲಿನ ಎರಡು ಎಕರೆ ಜಾಗದಲ್ಲಿ ರೇಷ್ಮೆ ಕೃಷಿ ಭವನ ನಿರ್ಮಿಸಬೇಕು. ಮಾರುಕಟ್ಟೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಿಗೆ ಪ್ರತಿ ತಿಂಗಳು ಸಂಬಳ ನಿಗದಿತವಾಗಿ ನೀಡಿ ಎಂಬ ಬೇಡಿಕೆಗಳನ್ನು ಮುಂದಿಟ್ಟರು.
ರೇಷ್ಮೆ ಇಲಾಖೆಯ ಆಯುಕ್ತ ಸಿ.ಜಿ.ವೃಷಭೇಂದ್ರ ಮೂರ್ತಿ ಮಾತನಾಡಿ, ನಾನು ಅಧಿಕಾರವನ್ನು ವಹಿಸಿಕೊಂಡು ಕೇವಲ ಮೂರು ದಿನಗಳಾಗಿವೆ. ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿನ ರೇಷ್ಮೆ ಬೆಳೆಗಾರರು, ರೀಲರುಗಳು ಹಾಗೂ ರೈತ ಮುಖಂಡರ ಬೇಡಿಕೆಗಳು, ಸಮಸ್ಯೆಗಳನ್ನೆಲ್ಲಾ ದಾಖಲಿಸಿಕೊಂಡಿದ್ದೇನೆ. ಹಂತಹಂತವಾಗಿ ಎಲ್ಲಾ ಬೇಡಿಕೆಗಳನ್ನೂ ಈಡೇರಿಸುವೆನೆಂದು ಭರವಸೆ ನೀಡಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯ ಆವರಣದಲ್ಲಿರುವ ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯ ಮಳಿಗೆಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದರು. ಕೆಲವು ರೇಷ್ಮೆ ಬಿಚ್ಚಾಣಿಕಾ ಘಟಕಗಳನ್ನು ಭೇಟಿ ನೀಡಿದರು. ಆ ಸಂದರ್ಭದಲ್ಲಿ ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ ಮತ್ತು ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ಮಾತನಾಡಿ, ನಮ್ಮಲ್ಲಿನ ರೇಷ್ಮೆ ಗೂಡನ್ನು ಸರ್ಕಾರದ ವತಿಯಿಂದ ಖರೀದಿಸಿ ಕೆ.ಎಸ್.ಐ.ಸಿ ರೇಷ್ಮೆ ಉತ್ಪಾದನೆ ಹಾಗೂ ಸೀರೆ ತಯಾರಿ ಮಾಡಲಾಗುತ್ತಿದೆ. ಆ ಮಗ್ಗಗಳ ಕಾರ್ಖಾನೆಗಳನ್ನು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮಾಡಿ ಇಲ್ಲಿನ ಆರ್ಥಿಕತೆ ಇನ್ನಷ್ಟು ಅಭಿವೃದ್ಧಿಯಾಗುತ್ತದೆ. ರೇಷ್ಮೆ ಗೂಡಿನ ಮಾರುಕಟ್ಟೆಯಂತೆ ಕಚ್ಚಾ ರೇಷ್ಮೆಯ ಮಾರುಕಟ್ಟೆಯನ್ನು ಮಾಡಿ. ಸೂರತ್, ಧರ್ಮಾವರಂ, ಕಂಚಿ ಮುಂತಾದೆಡೆಗಳಿಂದ ರೇಷ್ಮೆ ಖರೀದಿಸಲು ನಮ್ಮಲ್ಲಿಗೆ ಬರುವಂತೆ ಮಾಡುವ ಮೂಲಕ ತಾಲ್ಲೂಕು ಇನ್ನಷ್ಟು ಬೆಳವಣಿಗೆ ಕಾಣುತ್ತದೆ ಎಂದು ಸಲಹೆ ನೀಡಿದರು.
ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಎಸ್.ವಿ.ಕುಮಾರ್, ಉಪನಿರ್ದೇಶಕ ಸುಭಾಷ್ ಬಿ.ಸಾತೇನಹಳ್ಳಿ, ಸಹಾಯಕ ನಿರ್ದೇಶಕ ಬೋಜಣ್ಣ, ರೈತಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಎಸ್.ಎಂ.ನಾರಾಯಣಸ್ವಾಮಿ, ಕೆಂಪರೆಡ್ಡಿ, ರಾಮಚಂದ್ರಪ್ಪ, ದೇವರಾಜ್, ವೇಣುಗೋಪಾಲ್, ಮುನಿನಂಜಪ್ಪ, ಕೃಷ್ಣಪ್ಪ, ರಮೇಶ್, ಮೂರ್ತಿ, ಕೆಂಪಣ್ಣ, ಚನ್ನಕೇಶವ, ರಾಮಕೃಷ್ಣಪ್ಪ ಹಾಜರಿದ್ದರು.
- Advertisement -
- Advertisement -
- Advertisement -