ರೈತರ ಸಿದ್ಧಾಂತಕ್ಕೆ ಧಕ್ಕೆಯಾಗಿದೆ. ರೈತರಲ್ಲದವರು ರೈತ ಸಂಘದ ಹೆಸರಿಟ್ಟುಕೊಂಡು ವೈಯಕ್ತಿಕ ಧ್ವೇಷದಿಂದ ರೈತನೊಬ್ಬನ ಆಸ್ತಿಯನ್ನು ಕಬಳಿಸಲು ಸಂಚು ಹೂಡಿರುವುದು ಖಂಡನೀಯ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘದ ಸದಸ್ಯರು ತಾಲ್ಲೂಕು ಕಚೇರಿಯ ಮುಂದೆ ಧರಣಿ ನಡೆಸಿದ್ದಾರೆ. ಎ.ಪಿ.ಎಂ.ಸಿ ಮಾರುಕಟ್ಟೆಗೆ ಸ್ಥಳ ನಿಗದಿ ಮಾಡಲು ಹಾಗೂ ಕೊಳಚೆ ನಿವಾಸಿಗಳಿಗೆ ಸ್ಥಳವನ್ನು ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ನಮ್ಮ ಸ್ವಾಗತವಿದೆ. ಆದರೆ, ಶಿಡ್ಲಘಟ್ಟ ಗ್ರಾಮ ಸರ್ವೆ ಸಂಖ್ಯೆ 64 ಅನ್ನು ಅವರು ಕೋರುತ್ತಿರುವುದು ಅಕ್ರಮವಾಗಿದೆ. ರೈತ ಬಿ.ನಾರಾಯಣಸ್ವಾಮಿ ಅವರ ಪಿತ್ರಾರ್ಜಿತ ಜಮೀನನ್ನು ಕಬಳಿಸಲು ಅವರು ಹುನ್ನಾರ ನಡೆಸಿದ್ದಾರೆ. ರೈತ ಸಂಘದ ಹೆಸರಿನಲ್ಲಿ ರೈತನೊಬ್ಬನಿಗೆ ಕಿರುಕುಳ ಕೊಡುತ್ತಿರುವುದು ತಲೆತಗ್ಗಿಸುವ ಕೆಲಸವಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳು, ಪೊಲೀಸ್ ಎಸ್‌ಪಿ, ತಹಶೀಲ್ದಾರ್ ಅವರ ಗಮನಕ್ಕೆ ಈ ವಿಷಯವನ್ನು ತಂದಿದ್ದೇವೆ. ಮುಂದಿನ ದಿನಗಳಲ್ಲಿ ರೈತನ ಪರವಾಗಿ ಚಳವಳಿಯನ್ನು ನಡೆಸುತ್ತೇವೆ ಎಂದು ಹೇಳಿದರು.
ರೈತ ಬಿ.ನಾರಾಯಣಸ್ವಾಮಿ ಮಾತನಾಡಿ, ನಮ್ಮ ಕುಟುಂಬದ ಮಾಲೀಕತ್ವಕ್ಕೆ ಸೇರಿರುವ ಜಮೀನಿನ ಸರ್ವೆ ನಂಬರನ್ನು ಭಿತ್ತಿ ಪತ್ರದಲ್ಲಿ ಹಾಕಿಸಿ ಬೀದಿ ಬೀದಿ ಪ್ರಚಾರ ನಡೆಸಿ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ನಮ್ಮ ಸ್ವತ್ತನ್ನು ಕಬಳಿಸುವ ಹುನ್ನಾರವಿದು. ಈ ಹಿಂದೆ ಕೆಲವರು ನಾಗರಿಕ ಹಕ್ಕುಗಳ ಸಂರಕ್ಷಣಾ ಸಮಿತಿ ಎಂಬ ಸಂಘಟನೆಯ ಮೂಲಕ ನಮಗೆ ಕಿರುಕುಳ ನೀಡಿದ್ದರು. ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಸಿಕ್ಕನಂತರ ಈಗ ಹಸಿರು ಶಾಲು ಧರಿಸಿ ತೊಂದರೆ ಮಾಡುತ್ತಿದ್ದಾರೆ. ಪೊಲೀಸರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತಾದೂರು ಮಂಜುನಾಥ್, ಎಸ್.ಎಂ.ನಾರಾಯಣಸ್ವಾಮಿ, ಸತ್ಯನಾರಾಯಣ, ವೀರಾಪುರ ಮುನಿನಂಜಪ್ಪ, ವೇಣುಗೋಪಾಲ್, ಏಜಾಜ್ ಹಾಜರಿದ್ದರು.
- Advertisement -
- Advertisement -
- Advertisement -