ಕೊರೊನಾ ಲಾಕ್ ಡೌನ್ ಒಂದೆಡೆ ರೈತರನ್ನು ಕಷ್ಟಕ್ಕೆ ಸಿಲುಕಿಸಿದ್ದರೆ, ಮತ್ತೊಂದೆಡೆ ಸಾಮಾನ್ಯ ಜನರು, ದಿನಗೂಲಿ ಕಾರ್ಮಿಕರು, ಮದ್ಯಮವರ್ಗದವರನ್ನು ಸಹ ಹೈರಾಣಗೊಳಿಸಿದೆ. ಇಬ್ಬರ ನೋವನ್ನೂ ಕಡಿಮೆ ಮಾಡುವ ನಿಟ್ಟಿನಲ್ಲಿ ತಾಲ್ಲೂಕಿನ ರೈತರು ಬೆಳೆದಿರುವ ತರಕಾರಿಗಳನ್ನು ಕೊಂಡು ವರ್ಗೀಕರಿಸಿ ನಗರದ ಸುಮಾರು 15 ಸಾವಿರ ಕುತುಂಬಗಳಿಗೆ ಹಂಚುತ್ತಿದ್ದೇವೆ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ತಿಳಿಸಿದರು.
ನಗರದ ಹೊರವಲಯದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ವಿವಿಧ ತರಕಾರಿಗಳ ಪ್ಯಾಕೆಟ್ ಗಳನ್ನು ನಗರದ ವಿವಿಧ ವಾರ್ಡ್ ಗಳಿಗೆ ಕಳುಹಿಸಿ ಅವರು ಮಾತನಾಡಿದರು.
ಕೊರೊನಾ ತಡೆಗಟ್ಟಲು ಸರ್ಕಾರ ಲಾಕ್ ಡೌನ್ ಘೋಷಿಸುತ್ತಿದ್ದಂತೆಯೇ ತಾಲ್ಲೂಕಿನಲ್ಲಿ ಸುಮಾರು ಎಪ್ಪತ್ತು ಸಾವಿರ ಮಾಸ್ಕ್ ಮತ್ತು ಒಂದು ಲಕ್ಷ ಮುವ್ವತ್ತು ಸಾವಿರ ಸೋಪುಗಳನ್ನು ಮನೆಮನೆಗೆ ವಿತರಿಸಿದೆವು. ಇದೀಗ ನಮ್ಮ ಭಾಗದ ರೈತರು ಬೆಳೆದಿರುವ ತರಕಾರಿಗಳನ್ನು ಸಾಗಾಣಿಕೆ ಮಾಡಲಾಗದೇ ಮಾರಲಾಗದೇ ಪರಿತಪಿಸುತ್ತಿದ್ದಾರೆ. ಅದಕ್ಕಾಗಿ ಕಳೆದ ಒಂದು ವಾರದಿಂದ ರೈತರ ತೋಟಗಳಿಗೇ ತೆರಳಿ ಕ್ಯಾರೆಟ್, ಟೊಮೇಟೋ, ಈರುಳ್ಳಿ, ಕೋಸು, ಬದನೆ, ಮೆಣಸಿನಕಾಯಿ, ಸೊಪ್ಪು, ಕುಂಬಳಕಾಯಿಯನ್ನು ಖರೀದಿಸಿ ತಂದು ವರ್ಗೀಕರಿಸಿ ಪಾಕೆಟ್ ಮಾಡಿದ್ದೇವೆ. ಸ್ವಯಂಸೇವಕರು ಪ್ರತಿಯೊಂದು ಮನೆಗೂ ಹೋಗಿ ತರಕಾರಿ ವಿತರಿಸಲಿದ್ದಾರೆ ಎಂದು ಹೇಳಿದರು.
ತರಕಾರಿಗಳನ್ನು ವಿತರಿಸುತ್ತಾ ಕೊರೊನಾ ಹೊಡೆದೋಡಿಸಬೇಕಾದರೆ ಪ್ರತಿಯೊಬ್ಬರೂ ಮನೆಗಳಲ್ಲಿಯೇ ಇರಿ, ಅಂತರ ಕಾಪಾಡಿಕೊಳ್ಳಿ, ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ಅರಿವು ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಆನೂರು ದೇವರಾಜ್, ವಿಶ್ವನಾಥ್, ನಾಗೇಶ್, ಮುನಿರಾಜು, ನಟರಾಜು, ಆನಂದ್ ಹಾಜರಿದ್ದರು.