24.2 C
Sidlaghatta
Saturday, October 11, 2025

ರೈತರು ಹಾಗೂ ರೀಲರುಗಳ ಮುಗಿಯದ ಸಂಕಷ್ಟ

- Advertisement -
- Advertisement -

ಒಂದಡೆ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬರುತ್ತಿರುವ ರೇಷ್ಮೆ ಗೂಡಿನ ಪ್ರಮಾಣದಲ್ಲಿ ಗಣನೀಯವಾಗಿ ಇಳಿಮುಖವಾಗುತ್ತಿದ್ದರೆ, ಮತ್ತೊಂದೆಡೆ ಆರ್ಥಿಕ ವ್ಯವಹಾರಕ್ಕೆ ಆಗುತ್ತಿರುವ ತೊಂದರೆಯಿಂದಾಗಿ ರೈತರು ಹಾಗೂ ರೀಲರುಗಳು ಸಂಕಷ್ಟ ಎದುರಿಸುವಂತಾಗಿದೆ. ರೇಷ್ಮೆಯನ್ನೇ ನಂಬಿ ಬದುಕುತ್ತಿರುವ ತಾಲ್ಲೂಕಿಗೆ ಬರಗಾಲದ ಪರಿಸ್ಥಿತಿ ಉಂಟಾಗಿದೆ.
ಶಿಡ್ಲಘಟ್ಟದ ರೇಷ್ಮೆಗೂಡು ಮಾರುಕಟ್ಟೆಗೆ ಬರುತ್ತಿದ್ದ ಸುಮಾರು ೧,೨೦೦ ಲಾಟುಗಳಷ್ಟು ಗೂಡಿಗೆ ಬದಲಾಗಿ ಕೇವಲ ೫೦೦ ರಿಂದ ೬೦೦ ಲಾಟುಗಳಷ್ಟೆ ಬರುತ್ತಿವೆ. ತೀವ್ರ ನೀರಿನ ಅಭಾವ ಹಾಗೂ ಉತ್ಪಾದನಾ ವೆಚ್ಚಗಳು ಏರಿಕೆಯಾಗುತ್ತಿರುವುದರಿಂದ ಬಹುತೇಕ ರೈತರು ರೇಷ್ಮೆಗೂಡು ಉತ್ಪಾದನೆಯಿಂದ ವಿಮುಖರಾಗುತ್ತಿದ್ದಾರೆ.
ಕೇಂದ್ರ ಸರ್ಕಾರ ಕಳೆದ ವರ್ಷ ನವೆಂಬರ್ ೮ ರಂದು ೫೦೦ ಮತ್ತು ೧೦೦೦ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ನಂತರ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ರೈತರು ಮತ್ತು ರೀಲರುಗಳು ಹೊರಬರಲಾಗಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಾರಕ್ಕೆ ಕೇವಲ ೨೪ ಸಾವಿರ ರೂಪಾಯಿಗಳ ಹಣವನ್ನಷ್ಟೆ ಡ್ರಾ ಮಾಡಿಕೊಳ್ಳಲು ನೀಡಿದ್ದ ಮಿತಿಯಿಂದಾಗಿ ಗೂಡು ಖರೀದಿಗಾಗಿ ಬರುವ ರೀಲರುಗಳು ಗೂಡಿನ ಪ್ರಮಾಣಕ್ಕೆ ಅನುಗುಣವಾಗಿ ಹಣವನ್ನು ಹೊಂದಿಸಲು ಸಾಧ್ಯವಾಗದೆ ಬಹಳಷ್ಟು ಮಂದಿ ಹರಾಜಿನಲ್ಲಿ ಭಾಗವಹಿಸುತ್ತಿಲ್ಲ.
ಕೆಲವು ರೀಲರುಗಳು ರೈತರಿಗೆ ನೇರವಾಗಿ ಹಣ ಪಾವತಿ ಮಾಡಲು ಸಾಧ್ಯವಾಗದೆ ಇರುವ ಕಾರಣ ರೈತರುಗಳಿಗೆ ಚೆಕ್ಕುಗಳ ಮೂಲಕ ಹಣ ಪಾವತಿ ಮಾಡುತ್ತಿದ್ದಾರೆ.
ರೀಲರುಗಳು ನೀಡುತ್ತಿರುವ ಚೆಕ್ಕುಗಳಲ್ಲಿ ಕಂಡು ಬರುತ್ತಿರುವ ಸಹಿಗಳು ತಾಳೆಯಾಗದೆ ಇರುವುದು, ಬ್ಯಾಂಕುಗಳ ಬದಲಾವಣೆ ಹಾಗು ಖಾತೆಗಳಲ್ಲಿ ಹಣ ಇಲ್ಲದೆ ಇರುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ರೈತರು ಎದುರಿಸುವಂತಾಗಿದೆ.
ರೀಲರುಗಳು ಪ್ರತಿ ಕೆ.ಜಿ.ಗೂಡಿಗೆ ಶೇ.1 ರಷ್ಟು ಕಮಿಷನ್ ನೀಡಿ ಗೂಡು ಖರೀದಿ ಮಾಡಬೇಕಾಗಿದೆ. ರೈತರು ಕೂಡಾ ಒಂದು ಕೆ.ಜಿ.ಗೂಡಿಗೆ ಶೇ.1 ರಷ್ಟು ಕಮಿಷನ್ ನೀಡಿ ಗೂಡು ಮಾರಾಟ ಮಾಡಬೇಕಾಗಿದೆ. ಒಟ್ಟು ದಿನಕ್ಕೆ ಒಂದರಿಂದ ಒಂದೂವರೆ ಕೋಟಿ ರೂಪಾಯಿಗಳಷ್ಟು ಹಣದ ವಹಿವಾಟು ನಡೆಯುತ್ತಿದ್ದು ಇಲ್ಲೆ ಬ್ಯಾಂಕಿನ ಶಾಖೆಯನ್ನು ತೆರೆಯಬೇಕು ಎನ್ನುವ ಒತ್ತಾಯವು ಕೂಡ ಕೇಳಿಬರುತ್ತಿದೆ. ದಿನವೊಂದಕ್ಕೆ ೩ ಲಕ್ಷ ರೂಪಾಯಿಗಳು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಸಂದಾಯವಾಗುತ್ತಿದ್ದು ರೈತರು ತೀವ್ರ ಸಂಕಷ್ಟದ ನಡುವೆ ಉತ್ಪಾದನೆ ಮಾಡುತ್ತಿರುವ ಗೂಡಿಗೆ ಪಡೆಯುತ್ತಿರುವ ಕಮಿಷನ್ ಹಣ ಹಾಗೂ ರೀಲರುಗಳು ನೀಡುತ್ತಿರುವ ಕಮಿಷನ್ ಹಣಕ್ಕೆ ಸಂಪೂರ್ಣ ವಿನಾಯಿತಿ ನೀಡಬೇಕು. ಇಲ್ಲವೆ ಅದನ್ನು ಶೇ.0.5 ಗೆ ಇಳಿಕೆ ಮಾಡಬೇಕು ಎನ್ನುವ ಬೇಡಿಕೆಯು ಸಹ ಕೇಳಿಬರುತ್ತಿದೆ.
‘ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಹಣದ ವ್ಯವಹಾರ ನಡೆಸಲು ಇದುವರೆಗೂ ಸಾಧ್ಯವಾಗುತ್ತಿಲ್ಲವಾದ್ದರಿಂದ ರೈತರು ಹಾಗೂ ರೀಲರುಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಚೆಕ್ಕುಗಳ ಮೂಲಕ ಹಣವನ್ನು ಪಾವತಿ ಮಾಡುವ ವ್ಯವಸ್ಥೆ ಮಾಡಿದ್ದೇವೆ. ಕೆಲವು ತಾಂತ್ರಿಕ ದೋಷಗಳು ಹೊರತು ಪಡಿಸಿದರೆ ರೈತರಿಗೆ ಹಣ ಸಂದಾಯವಾಗದೆ ಚೆಕ್‌ಗಳು ಬೌನ್ಸ್ ಆಗುತ್ತಿರುವ ಪ್ರಕರಣಗಳು ಕಡಿಮೆ. ಈ ರೀತಿಯ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರದ ಹಣಕಾಸು ಇಲಾಖೆಗೂ ನಾವು ಮನವಿ ಸಲ್ಲಿಸಿದ್ದೇವೆ. ಕ್ಯಾಸ್‌ಲೆಸ್ ವಹಿವಾಟಿಗಾಗಿ ಅನುಕೂಲ ಮಾಡಿಕೊಡಬೇಕು ಎನ್ನುವ ಬೇಡಿಕೆಯನ್ನು ಇಟ್ಟಿದ್ದೇವೆ.
ರುಕಟ್ಟೆಗೆ ಬಂದು ವಹಿವಾಟು ನಡೆಸುತ್ತಿದ್ದ ರೈತರಿಗೆ ಸರ್ಕಾರದಿಂದ ಸಿಗುತ್ತಿದ್ದ ಪ್ರೋತ್ಸಾಹಧನವನ್ನು ನಿಲ್ಲಿಸಿರುವುದರಿಂದ ಕೆಲವು ರೈತರು ನೇರವಾಗಿ ರೀಲರುಗಳ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿ ವಹಿವಾಟು ನಡೆಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಮಾರುಕಟ್ಟೆಗೆ ಬರುತ್ತಿರುವ ಗೂಡಿನ ಪ್ರಮಾಣದಲ್ಲಿಯೂ ಇಳಿಮುಖವಾಗಿದೆ’ ಎಂದು ಮಾರುಕಟ್ಟೆ ಉಪನಿರ್ದೇಶಕ ರತ್ನಯ್ಯಶೆಟ್ಟಿ ತಿಳಿಸಿದ್ದಾರೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!