ಸರ್ಕಾರದಿಂದ ಸಿಗುವಂತಹ ಅಲ್ಪಪ್ರಮಾಣ ಸಬ್ಸಿಡಿಗಳಿಗಾಗಿ ಇಲಾಖೆಗಳ ಮುಂದೆ ಸಾಲುಗಟ್ಟಿ ದಿನಗಟ್ಟಲೇ ನಿಲ್ಲುತ್ತಿರುವ ರೈತರಿಗೆ ಸಬ್ಸಿಡಿಗಳ ಬದಲಾಗಿ ನಾವು ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಲೆಗಳನ್ನು ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಮುನೇಗೌಡ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಆಯೋಜನೆ ಮಾಡಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಅನುದಾನಗಳು ತಲುಪದಿದ್ದರೆ, ಅಥವಾ ಅವುಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ, ನೇರವಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಮೇಲೆ ಕ್ರಮಜರುಗಿಸಲಾಗುತ್ತದೆ. ವಿದ್ಯಾರ್ಥಿ ನಿಲಯಗಳಲ್ಲಿ ವಾರ್ಡನ್ಗಳು ವಾಸ್ತವ್ಯ ಹೂಡುತ್ತಿಲ್ಲ. ಬಡವರ ಮಕ್ಕಳು ತಂಗುವಂತಹ ನಿಲಯಗಳು ಅವ್ಯವಸ್ಥೆಗಳ ಆಗರವಾಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಗಮನಹರಿಸುವಂತೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಬಿ.ಸಿ.ಎಂ.ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಬೇಡ್ಕರ್ ಭವನಗಳನ್ನು ನಿರ್ಮಾಣ ಮಾಡಲು ತಲಾ ೧೦ ಲಕ್ಷದಂತೆ ಐದು ಕಡೆಗಳಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಹಣ ಮಂಜೂರಾಗಿದೆ, ದಿಬ್ಬೂರಹಳ್ಳಿ, ನಿಲುವರಾತಹಳ್ಳಿ, ಜೆ.ವೆಂಕಟಾಪುರ, ಆನೂರು, ಮತ್ತು ಶಿಡ್ಲಘಟ್ಟ ನಗರಕ್ಕೆ ಮಂಜೂರಾಗಿದೆ. ಜೆ.ವೆಂಕಟಾಪುರ ಹಾಗೂ ನಿಲುವರಾತಹಳ್ಳಿ ಎರಡು ಕಡೆಗಳಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು, ಉಳಿದ ಕಡೆಗಳಲ್ಲಿ ಪ್ರಾರಂಭವಾಗಬೇಕು, ನಗರದಲ್ಲಿ ನಿವೇಶನ ಮಂಜೂರಾಗಬೇಕು ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿನ ಸಿಬ್ಬಂದಿ ಸ್ವಚ್ಚತೆಯನ್ನು ಕಾಪಾಡಬೇಕು. ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಸೂಕ್ತವಾದ ಚಿಕಿತ್ಸೆಯನ್ನು ನೀಡಬೇಕು. ಗರ್ಬಿಣಿ ಸ್ತ್ರೀಯರು ಹೆರಿಗೆ ಮಾಡಿಸಿಕೊಳ್ಳಲು ಬಂದಾಗ ಅವರಿಂದ ೨ ರಿಂದ ೩ ಸಾವಿರ ರೂಪಾಯಿಗಳನ್ನು ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದೆ. ವಿನಾಕಾರಣ ಶಸ್ತ್ರಚಿಕಿತ್ಸೆ ಮಾಡುವುದು. ಬೇರೆ ಆಸ್ಪತ್ರೆಗಳಿಗೆ ಕಳುಹಿಸಿಕೊಡುವುದನ್ನು ತಡೆಗಟ್ಟಿ ಆಸ್ಪತ್ರೆಯಲ್ಲೆ ಹೆರಿಗೆ ಮಾಡಿಸಲು ಕ್ರಮ ತೆಗೆದುಕೊಳ್ಳಿ, ತಾಲ್ಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಆಶಾ ಕಾರ್ಯಕರ್ತೆಯರಿದ್ದು, ಅವರ ಮೂಲಕ ಸ್ಥಳೀಯ ಜನಪ್ರತಿನಿಧಿಗಳ ಸಹಕಾರವನ್ನು ಪಡೆದುಕೊಂಡು ಡೆಂಗ್ಯೂ ಮುಂತಾದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರತಿಯೊಂದು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿರುವ ಉಪಯೋಗವಿಲ್ಲದ ಗೋಬರ್ಗ್ಯಾಸ್ ಘಟಕಗಳನ್ನು ಮುಚ್ಚಲು ಕ್ರಮ ತೆಗೆದುಕೊಳ್ಳಿ ಎಂದರು.
ಜಿ.ಪಂ.ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ಮಾತನಾಡಿ ಹಿಪ್ಪುನೇರಳೆ ತೋಟಗಳನ್ನು ನೀರಿನ ಅಭಾವದಿಂದ ಕಿತ್ತುಹಾಕುವ ಬದಲಿಗೆ ನೂತನ ಬಗೆಯ ಮಾದರಿಯನ್ನು ಬಳಕೆ ಮಾಡಿಕೊಂಡು ಗುಂಡಿಪದ್ದತಿಯಲ್ಲಿ ಬೆಳೆಯುವುದರಿಂದ ಹೆಚ್ಚು ನೀರು ಅಗತ್ಯವಿರುವುದಿಲ್ಲ, ಎಂದು ಸಲಹೆ ನೀಡಿದರು.
ಕುಡಿಯುವ ನೀರು, ಬೆಸ್ಕಾಂ ಇಲಾಖೆ, ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿಯನ್ನು ನೀಡಿದರು.
ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ರಾಧಮ್ಮ, ಸದಸ್ಯರಾದ ಶಿವಲೀಲಾರಾಜಣ್ಣ, ಎಸ್.ಎಂ.ನಾರಾಯಣಸ್ವಾಮಿ, ಸತೀಶ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಾನುಜಯ್ಯ, ಕುಡಿಯುವ ನೀರು ವಿಭಾಗದ ಎಇಇ ಗಣಪತಿ ಸಾಕರೆ, ಶಿವಾನಂದ, ಬಿ.ಇ.ಓ ರಘುನಾಥರೆಡ್ಡಿ ಮುಂತಾದವರು ಸಭೆಯಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -