ರೈತರ ಸಮಸ್ಯೆ ನಿವಾರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು ಮಂಗಳವಾರ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಬೈಕ್ ರ್ಯಾಲಿ ನಡೆಸಿದ ರೈತ ಸಂಘದ ಸದಸ್ಯರು ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿ ತಮ್ಮ ಬೇಡಿಕೆಗಳ ಮನವಿಯನ್ನು ಗ್ರೇಡ್ 2 ತಹಶೀಲ್ದಾರ್ ಕೃಷ್ಣಪ್ಪ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ನಮ್ಮ ಬಯಲುಸೀಮೆಯಲ್ಲಿ 6–7 ವರ್ಷಗಳಿಂದ ಸತತ ಬರಗಾಲದಿಂದ ರೈತರು ಜೀವನವನ್ನು ನಡೆಸುವುದು ಕಷ್ಟವಾಗಿದೆ. ಕಷ್ಟದ ಪರಿಸ್ಥಿತಿಯಲ್ಲಿಯೂ 1500 ಅಡಿಗಳವರೆಗೆ ಕೊಳವೆ ಬಾವಿಯನ್ನು ಕೊರೆಸಿ ಬೆಳೆ ಬೆಳೆದರೂ ಸೂಕ್ತ ಬೆಲೆ ಸಿಗದೆ ನಷ್ಟವನ್ನು ಅನುಭವಿಸುವಂತಾಗಿದೆ. ಜಾನುವಾರುಗಳಿಗೆ ಮೇವು ಸಿಗದಂತಾಗಿದೆ. ಬರಗಾಲಕ್ಕೆ ಪರಿಹಾರೋಪಾಯದ ನಿಟ್ಟಿನಲ್ಲಿ ಯಾವುದೇ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸುತ್ತಿಲ್ಲ. ಬರಪರಿಹಾರದ ಹಣ ಇನ್ನೂ ರೈತರಿಗೆ ತಲುಪಿಲ್ಲ. ರೈತರ ಆತ್ಮಹತ್ಯೆ ನಿಲ್ಲಬೇಕಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳ ಕಡೆ ಗಮನ ಹರಿಸಬೇಕು ಎಂದರು.
ಡಾ.ಸ್ವಾಮಿನಾಥನ್ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕು. ನೀರಾವರಿ ತಜ್ಞ ಎ.ಕೆ.ಬಜಾಜ್ ಅವರ ನೀರಾವರಿ ವರದಿಯನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಬೇಕು. ರೈತರು ಕೃಷಿಗೆ ಬಳಸುವ ಎಲ್ಲ ವಸ್ತುಗಳನ್ನು ಜಿಎಸ್ಟಿಯಿಂದ ಮುಕ್ತಗೊಳಿಸಬೇಕು, ನರೇಗಾ ಯೋಜನೆಯನ್ನು ಪಟ್ಟಣದಲ್ಲಿನ ಎಲ್ಲ ರೈತರಿಗೂ ಸಿಗುವಂತಾಗಬೇಕು. 2016–17ನೇ ಸಾಲಿನ ಬೆಳೆ ವಿಮೆಯನ್ನು ರೈತರಿಗೆ ಸಿಗಬೇಕು. ಪಹಣಿಯಲ್ಲಿನ ಪಿ2 ನಂಬರಿನಿಂದ ತೊಂದರೆಯಾಗಿದ್ದು ಕೂಡಲೇ ಜಿಲ್ಲಾಡಳಿತ ದುರಸ್ಥಿಗೊಳಿಸಿ ರೈತರಿಗೆ ಅನುಕೂಲಮಾಡಿಕೊಡಬೇಕು. ದನಕರುಗಳಿಗೆ ಉಚಿತವಾಗಿ ಮೇವಿನ ಬೀಜಗಳನ್ನು ವಿತರಿಸಬೇಕು ಮುಂತಾದ ಬೇಡಿಕೆಗಳ ಮನವಿಯನ್ನು ರೈತರು ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಕೆ.ವಿ.ವೇಣುಗೋಪಾಲ್, ಆಂಜಿನಪ್ಪ, ಮುನಿನಂಜಪ್ಪ, ಮೋಹನ್, ಸಂಜೀವಪ್ಪ, ಕೃಷ್ಣಪ್ಪ, ಎಂ.ದೇವರಾಜ್, ನರಸಿಂಹರೆಡ್ಡಿ, ಅಶ್ವತ್, ಗೋವಿಂದಪ್ಪ, ಪ್ರಭಾಕರ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -