ಏಪ್ರಿಲ್ ೧೮ ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಿರ್ದೇಶನದ ಮೇರೆಗೆ ಏಪ್ರಿಲ್ ೧ ರಂದು ಬೆಳಿಗ್ಗೆ ೧೧ ಗಂಟೆಗೆ ಪಕ್ಷದ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಣೆಗಾಗಿ ಸಭೆ ಕರೆಯಲಾಗಿದೆ ಎಂದು ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ವರದನಾಯಕನಹಳ್ಳಿಯ ಪಟಾಲಮ್ಮ ದೇವಾಲಯದ ಕಲ್ಯಾಣಮಂಟಪದಲ್ಲಿ ಏಪ್ರಿಲ್ ೧ ರಂದು ಸಭೆಯನ್ನು ಕರೆದಿದ್ದೇವೆ. ನಮ್ಮ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಅವರ ಅಭಿಪ್ರಾಯ ಪಡೆದುಕೊಳ್ಳಲು ಈ ಸಭೆಯಲ್ಲಿ ಕರೆಯಲಾಗಿದೆ. ನಮ್ಮ ಪಕ್ಷದ ಹೈಕಮಾಂಡ್ ಸೂಚನೆಯನ್ನು ಪಕ್ಷದ ಕಾರ್ಯಕರ್ತರು ಪಾಲನೆ ಮಾಡಲಿದ್ದೇವೆ. ದೇವೇಗೌಡರು ರಾಷ್ಟ್ರಮಟ್ಟದಲ್ಲಿ ಘಟಬಂಧನ್ ನೇತೃತ್ವ ವಹಿಸಿಕೊಂಡಿರುವುದರಿಂದ ಅವರ ಕೈ ಬಲಪಡಿಸುವುದು, ವರಿಷ್ಠರ ಆದೇಶವನ್ನು ಕಾರ್ಯಕರ್ತರಿಗೆ ತಿಳಿಸಿ ಅಭಿಪ್ರಾಯ, ಚರ್ಚೆ ಮಾಡಿ ಎಲ್ಲರ ಮನದಿಂಗಿತವನ್ನು ತಿಳಿದುಕೊಂಡು ಅದರಂತೆ ಮುನ್ನಡೆಯುವುದು ಕೂಡಾ ನಮ್ಮ ಉದ್ದೇಶವಾಗಿದೆ ಎಂದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಬಿ.ವೆಂಕಟೇಶ್ ಮಾತನಾಡಿ, ಮೈತ್ರಿಪಾಲನೆಗಾಗಿ ಪಕ್ಷದ ಕಾರ್ಯಕರ್ತರನ್ನು ಸಭೆ ಕರೆಯಲಾಗಿದೆ. ಸಭೆಯಲ್ಲಿ ಮುಂದೆ ಚುನಾವಣೆಯಲ್ಲಿ ನಾವು ಹೇಗೆ ಕೆಲಸ ಮಾಡಬೇಕು ಎನ್ನುವ ತೀರ್ಮಾನಗಳನ್ನು ಎಲ್ಲರ ಅಭಿಪ್ರಾಯ ಸಂಗ್ರಹಣೆಯ ಮೂಲಕ ಮಾಡಲಾಗುತ್ತದೆ ಎಂದರು.
ಜೆಡಿಎಸ್ ಮುಖಂಡ ಹುಜಗೂರು ರಾಮಣ್ಣ ಮಾತನಾಡಿ, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ನಮಗೆ ಶಕ್ತಿಯಾಗಿದ್ದಾರೆ. ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿಕೊಂಡು ನಮ್ಮ ಪಕ್ಷದ ನಾಯಕರ ನೇತೃತ್ವದಲ್ಲಿ ಮುಂದಿನ ರೂಪುರೇಷೆಗಳನ್ನು ಮಾಡುತ್ತೇವೆ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಸದಸ್ಯ ರಾಜಶೇಖರ್, ತಾದೂರು ರಘು, ಮುಗಿಲಡಿಪಿ ನಂಜಪ್ಪ, ಆದಿಲ್ ಪಾಷ, ಸಿಖಂದರ್, ಆರ್.ಎ.ಉಮೇಶ್ ಹಾಜರಿದ್ದರು.
- Advertisement -
- Advertisement -
- Advertisement -