ಯುಗಾದಿ ಹಬ್ಬದ ಮಾರನೆಯ ದಿನವನ್ನು ವರ್ಷದ ತೊಡಕು ಎಂದು ಆಚರಿಸಲಾಗುತ್ತದೆ. ವರ್ಷದ ತೊಡಕು ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾಗಿದ್ದು, ಅಂದು ವರ್ಷಪೂರ್ತಿಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ. ಹೀಗಾಗಿ ವರ್ಷ ತೊಡಕಿಗೂ ಯುಗಾದಿ ದಿನದಷ್ಟೇ ಪ್ರಾಮುಖ್ಯತೆ. ಈ ದಿನದಂದು ಕುರಿ ಕೋಳಿ ಮಾಂಸದ ಅಡುಗೆ ಮಾಡಿ ವರ್ಷದ ತೊಡಕು ಆಚರಿಸುವುದು ಸಾಮಾನ್ಯ. ಸಂಬಂಧಿಗಳನ್ನು ಹಾಗೂ ಸ್ನೇಹಿತರನ್ನು ಊಟಕ್ಕೆ ಕರೆಯುವುದು ವಾಡಿಕೆ.
ಕೊರೊನಾ ವೈರಸ್ ತಡೆಗೆ ರಾಷ್ಟ್ರಾದ್ಯಂತ 21 ದಿನಗಳ ವರೆಗೆ ಲಾಕ್‌ಡೌನ್ ಘೋಷಣೆ ನಡುವೆಯೂ ಹಿಂದೂಗಳ ಹೊಸ ವರ್ಷದ ಮೊದಲ ಹಬ್ಬ ಯುಗಾದಿ ಹಬ್ಬದ ಮರುದಿನ ಆಚರಿಸುವ ವರ್ಷದ ತೊಡಕಿಗೆ ನಗರ ಹಾಗೂ ತಾಲ್ಲೂಕಿನ ಕೆಲವೆಡೆ ಮಾಂಸ ಕೊಳ್ಳಲು ಜನರು ಮುಗಿಬಿದ್ದಿದ್ದರು.
ಜನರು ಮಾಂಸಕ್ಕಾಗಿ ನುಗ್ಗಬಾರದೆಂದು ಜನರು ಕೊಳ್ಳಲು ತಾಲ್ಲೂಕು ಆಡಳಿತ ಬೆಳಗ್ಗೆ ಸಮಯವನ್ನು ನಿಗದಿಪಡಿಸಿ, ನಿರ್ದಿಷ್ಟ ದೂರದಲ್ಲಿ ನಿಂತು ವ್ಯಾಪಾರ ಮಾಡುವಂತೆ ತಿಳಿಹೇಳಿದ್ದರೂ ಕೇಳುವ ವ್ಯವಧಾನ ಜನರಲ್ಲಿ ಇಲ್ಲವಾಗಿತ್ತು. ಹಲವೆಡೆ ಜನರ ನೂಕುನುಗ್ಗಲನ್ನು ಪೊಲೀಸರು ನಿಯಂತ್ರಿಸಬೇಕಾಯಿತು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿನ ಮೂರು ಮಾಂಸದ ಅಂಗಡಿಗಳಿಗೆ ಹಿಂದಿನಿಂದಲೂ ವಿವಿಧ ತಾಲ್ಲುಕು ಹಾಗೂ ಜಿಲ್ಲೆಗಳ ಗ್ರಾಹಕರಿದ್ದಾರೆ. ಆದರೆ ಸರ್ಕಾರ ನಿರ್ಬಂಧವಿರಿಸಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳ ಗ್ರಾಹಕರು ಆಗಮಿಸಿದ್ದರು. ಗ್ರಾಮ ಪಂಚಾಯಿತಿಯ ವತಿಯಿಂದ ಕೆಲವು ಸದಸ್ಯರು ಖುದ್ದಾಗಿ ನಿಂತು ಜನರು ನಿರ್ದಿಷ್ಟ ದೂರದಲ್ಲಿ ನಿಂತು ವ್ಯಾಪಾರ ಮಾಡುವಂತೆ ನೋಡಿಕೊಂಡರು.
- Advertisement -
- Advertisement -
- Advertisement -