ಕೊರೊನಾ ವೈರಸ್ ತಡೆಗಟ್ಟಲು ರಾಜ್ಯಗಳ ನಡುವೆ, ದೇಶಗಳ ನಡುವೆ ಸಾರಿಗೆ, ರೈಲು, ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿದ ಪರಿಣಾಮ ಹಂಡಿಗನಾಳ ಗ್ರಾಮದ ರೈತ ಮಹೇಂದ್ರ ತಾವು ಬೆಳೆದಿರುವ ಸುಂದರ ಗುಲಾಬಿ ಹೂಗಳನ್ನು ವಿದೇಶಕ್ಕೆ ಕಳುಹಿಸಲಾಗದೇ ಮನೆಯಲ್ಲಿಯೇ ಇರಿಸಿಕೊಂಡು ನಷ್ಟವನ್ನು ಹೊಂದಬೇಕಾಗಿದೆ.
ರೈತ ಮಹೇಂದ್ರ ಒಂದು ಎಕರೆ ಪಾಲಿಹೌಸ್ ನಲ್ಲಿ ವಿದೇಶಕ್ಕೆ ರಫ್ತು ಮಾಡುವ ತಾಜ್ ಮಹಲ್ ಎಂಬ ಗುಲಾಬಿ ತಳಿಯನ್ನು ಬೆಳೆದಿದ್ದಾರೆ. ಪಾಲಿಹೌಸ್ ನಿರ್ಮಾಣಕ್ಕೆ, ಗಿಡ ನೆಟ್ಟು ಬೆಳೆಸಲು, ಔಷಧಿ, ಗೊಬ್ಬರಕ್ಕೆಂದು ಸುಮಾರು 40 ಲಕ್ಷ ರೂ ಖರ್ಚು ಮಾಡಿದ್ದಾರೆ. ನಳನಳಿಸುತ್ತಿರುವ ಗುಲಾಬಿ ಹೂಗಳನ್ನು ತಮ್ಮ ಮುಂದಿರಿಸಿಕೊಂಡು ಏನು ಮಾಡಲೂ ತೋಚದೆ ಕಂಗಾಲಾಗಿದ್ದಾರೆ. ಗಿಡವನ್ನೇ ಕತ್ತರಿಸಲು ಅವರು ತೀರ್ಮಾನಿಸಿದ್ದಾರೆ.
“ದಿನಬಿಟ್ಟು ದಿನ ನಾಲ್ಕು ಸಾವಿರ ಹೂಗಳನ್ನು ಕಟಾವು ಮಾಡುತ್ತಿದ್ದೆವು. ಹೆಬ್ಬಾಳದ ಐಫ್ಯಾಬ್ ಎಂಬ ಕಂಪೆನಿಯೊಂದಕ್ಕೆ ಪ್ಯಾಕ್ ಮಾಡಿ ಕಳುಹಿಸುತ್ತಿದ್ದೆ. ಅವರು ವಿದೇಶಗಳಿಗೆ ರಫ್ತು ಮಾಡುತ್ತಿದ್ದರು. ಕೊರೊನಾ ಭೀತಿಯಿಂದಾಗಿ ವಿಮಾನಗಳ ಸಾಗಾಟ ನಿಂತಿದೆ. ಹಾಗಾಗಿ ಗುಲಾಬಿ ಹೂಗಳನ್ನು ಕಿತ್ತು ಹಾಗೇ ಇಡಬೇಕಾಗಿದೆ. ಇದರಿಂದ ಒಂದು ತಿಂಗಳಿಗೆ ಎಂಬತ್ತರಿಂದ ತೊಂಬತ್ತು ಸಾವಿರ ರೂಗಳ ನಷ್ಟ ಆಗುತ್ತಿದೆ.
“ಒಂದು ಹೂ ಬೆಳೆಯಲು 45 ದಿನ ಬೇಕಾಗುತ್ತದೆ. ಮೊಗ್ಗಿರುವಾಗಲೇ ಅದು ನಿರ್ದಿಷ್ಟ ಆಕಾರವನ್ನು ಪಡೆಯಲು ಬಡ್ ಕ್ಯಾಪ್ ಹಾಕುತ್ತೇವೆ. ಅದಾದ ಆರು ದಿನಗಳಾದ ಮೇಲೆ ನಿರ್ದಿಷ್ಟ ಉದ್ದದ ಅಳತೆಗೆ ತಕ್ಕಂತೆ ಕತ್ತರಿಸಿ, ಜೋಡಿಸಿ ಪ್ಯಾಕ್ ಮಾಡೂತ್ತೇವೆ. ಲಾಕ್ ಡೌನ್ ನಿಂದಾಗಿ ವಿದೇಶಕ್ಕೆ ಈಗ ಹೂವನ್ನು ರಫ್ತು ಮಾಡುವಂತಿಲ್ಲ. ಒಂದು ಹೂವನ್ನು ಮೂರೂವರೆಯಿಂದ ನಾಲ್ಕು ರೂಗಳಿಗೆ ಮಾರುತ್ತಿದ್ದೆವು. ಈಗ ಇವನ್ನು ಕೇಳುವವರೇ ಇಲ್ಲ” ಎಂದು ರೈತ ಮಹೇಂದ್ರ ತಿಳಿಸಿದರು.
“ರಸಗೊಬ್ಬರ, ಔಷಧಿ, ಕೂಲಿ ಮುಂತಾದವುಗಳು ಸೇರಿಸಿದರೆ ಒಂದು ತಿಂಗಳಿಗೆ ಗುಲಾಬಿ ಗಿಡಗಳ ನಿರ್ವಹಣೆ ಖರ್ಚೇ 50 ಸಾವಿರ ರೂಗಳಷ್ಟಿದೆ. ಈಗ ಆಗಿರುವ ನಷ್ಟದ ಜೊತೆಗೆ ಅದೂ ಸೇರುವುದನ್ನು ತಪ್ಪಿಸಲು ಗುಲಾಬಿ ಗಿಡಗಳನ್ನು ನೆಲದಿಂದ ಒಂದೂವರೆ ಅಡಿ ಬಿಟ್ಟು ಕತ್ತರಿಸುತ್ತಿದ್ದೇವೆ. ಅದು ಚಿಗುರಿ ಹೂ ಬಿಡಲು ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ” ಎಂದು ಅವರು ನೋವಿನಿಂದ ಹೇಳಿದರು.