ಶಿಕ್ಷಣದಲ್ಲಿ ಮೌಲ್ಯಗಳು ಉಳಿಯಬೇಕಾದರೆ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದು ಅಗತ್ಯ. ಉತ್ತಮ ಬೋಧಕ ವೃಂದ ಮತ್ತು ಸರ್ಕಾರದಿಂದ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದರೂ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿರುವುದು ಮತ್ತು ಫಲಿತಾಂಶದ ಇಳಿಕೆ ಆಘಾತಕರವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಿವೃತ್ತ ಶಿಕ್ಷಕ ದಿವಂಗತ ಎಂ.ಕೃಷ್ಣಪ್ಪ ವೇದಿಕೆಯಲ್ಲಿ ಶುಕ್ರವಾರ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಂಗ್ಲ ಭಾಷೆಯನ್ನು ಕೇವಲ ಸಂವಹನ ಭಾಷೆಯಷ್ಟೆ ಆದರೂ ಉನ್ನತ ಶಿಕ್ಷಣವನ್ನು ಇಂಗ್ಲೀಷಿನ ಮಾದ್ಯಮದಲ್ಲಿ ಕಲಿಯಬೇಕಿರುವುದರಿಂದ ಹಾಗೂ ಉದ್ಯೋಗದ ಉದ್ದೇಶದಿಂದ ಖಾಸಗಿ ಶಾಲೆಗಳತ್ತ ಪೋಷಕರು ಮೊರೆ ಹೋಗುತ್ತಿದ್ದಾರೆ. ಶಿಕ್ಷಣವೆಂದರೆ ಮಗುವಿನ ಸರ್ವಾಂಗೀಣ ಅಭಿವೃದ್ಧಿಯಾಗಿದೆ. ಪೋಷಕರು ಮಕ್ಕಳಿಗೆ ಒತ್ತಡದ ಬದುಕನ್ನು ನೀಡಬಾರದು ಎಂದು ಹೇಳಿದರು.
ಎಸ್‌ಡಿಎಂಸಿ ಸದಸ್ಯರ ಸಮಿತಿ ಸರ್ಕಾರಿ ಶಾಲೆಯಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳನ್ನು ಪ್ರಾರಂಭಿಸಿದಲ್ಲಿ ಖಾಸಗಿ ಶಾಲೆಗಳಿಗೆ ಹೋಗುವುದು ತಪ್ಪುತ್ತದೆ ಎಂದು ಮನವಿ ಸಲ್ಲಿಸಿದಾಗ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಅವರು ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿದ್ದು, ಶೀಘ್ರವಾಗಿ ಜಾರಿಯಾಗಬಹುದು ಎಂದರು. ಮೇಲೂರಿನ ಸರ್ಕಾರಿ ಪ್ರೌಢಶಾಲೆಗೆ ಹೆಚ್ಚುವರಿಯಾಗಿ ಎರಡು ಕೊಠಡಿಗಳು ಮಂಜೂರಾಗಿದೆ ಎಂದು ತಿಳಿಸಿದರು.
ಕೋಲಾರ ಎಸ್.ಎನ್.ಆರ್ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಾ ವೈದ್ಯ ಡಾ.ಡಿ.ಕೆ.ರಮೇಶ್ ಮಾತನಾಡಿ, ವಿದ್ಯಾರ್ಥಿಗಳ ನೆನಪಿನ ಶಕ್ತಿ ವೃದ್ಧಿಸಲು ಉತ್ತಮ ಆರೋಗ್ಯ ಹೊಂದಬೇಕು. ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ಆಹಾರ ಕ್ರಮವನ್ನು ರೂಢಿಸಿಕೊಳ್ಳಬೇಕು. ಈ ಬಗ್ಗೆ ಶಿಕ್ಷಕರು ಮತ್ತು ಪೋಷಕರು ಕಾಳಜಿ ವಹಿಸಬೇಕು. ಪಠ್ಯೇತರ ಚಟುವಟಿಕೆಗಳಿಗೆ ಸಮಾನವಾದ ಆದ್ಯತೆಯನ್ನು ನೀಡಬೇಕು. ಆಗ ಮಾತ್ರ ದೈಹಿಕ, ಮಾನಸಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಮಗುವಿನ ಗ್ರಹಣಾ ಶಕ್ತಿಯೂ ವೃದ್ಧಿಸುತ್ತದೆ. ಕೇವಲ ಅಂಕ ಗಳಿಕೆಯಷ್ಟೇ ವಿದ್ಯಾಭ್ಯಾಸವಲ್ಲ, ನೈತಿಕ, ಮೌಲ್ಯಯುತ ಶಿಕ್ಷಣ ಮುಖ್ಯ. ಒತ್ತಡದ ಜೀವನ ಅನಾರೋಗ್ಯಕ್ಕೆ ದಾರಿ ಎಂದು ಹೇಳಿದರು.
ಶಾಲೆಯಲ್ಲಿ ನಡೆದಿದ್ದ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ 50 ವಿದ್ಯಾರ್ಥಿಗಳಿಗೆ ಕಸಾಪ ತಾಲ್ಲೂಕು ಘಟಕದ ವತಿಯಿಂದ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ನಿವೃತ್ತ ಶಿಕ್ಷಕ ದಿವಂಗತ ಎಂ.ಕೃಷ್ಣಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆಯನ್ನು ನಡೆಸಲಾಯಿತು.
ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್, ಪವಾಡ ಬಯಲು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಉನ್ನತ ಸರ್ಕಾರಿ ಹುದ್ದೆಯಲ್ಲಿರುವ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಅಗ್ನಿಶಾಮಕದಳದ ಎಂ.ಎಲ್.ಕಿಶೋರ್, ಪಿಡಿಓ ಕಾತ್ಯಾಯಿನಿ, ಉಪವಲಯ ಅರಣ್ಯಾಧಿಕಾರಿ ರಘು, ಉಪನ್ಯಾಸಕಿ ಅಶ್ವಿನಿ ಮತ್ತು ಏರೋಸ್ಪೇಸ್ ಕಂಪೆನಿಯಲ್ಲಿನ ಉದ್ಯೋಗಿ ನವೀನ್ ಅವರನ್ನು ಸನ್ಮಾನಿಸಲಾಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷ ವೈ.ಜೆ.ಜನಾರ್ಧನ್, ಗ್ರಾಮ ಪಂಚಾಯಿತಿ ಅಧರ್ಯಕ್ಷೆ ಜಮುನಾ ಧರ್ಮೇಂದ್ರ, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮಳ್ಳೂರು ಹರೀಶ್, ಮೇಲೂರು ವೈದ್ಯಾಧಿಕಾರಿ ಚೌಡಸಂದ್ರ ಡಾ.ಎನ್.ರಮೇಶ್, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ನಿಕಟಪೂರ್ವ ಜಿಲ್ಲಾಧ್ಯಕ್ಷ ವೈ.ಎಲ್.ಹನುಮಂತರಾವ್, ಮುಖ್ಯ ಶಿಕ್ಷಕಿ ಕೆ.ಮಂಗಳಗೌರಮ್ಮ, ಎಂ.ಪಿ.ಸಿ.ಎಸ್. ಅಧ್ಯಕ್ಷ ಶ್ರೀನಿವಾಸಮೂರ್ತಿ, ಆರ್.ಎ. ಉಮೇಶ್, ಧರ್ಮೇಂದ್ರ, ಮಾಲಾಶ್ರೀ, ಶ್ರೀನಿವಾಸ್, ಕುಮಾರಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -